×
Ad

ನೋಟು ನಿಷೇಧದ ಪರಿಣಾಮ: ವಿತ್ತ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ ಸಂಸದೀಯ ಸಮಿತಿ

Update: 2017-11-09 20:30 IST

ಹೊಸದಿಲ್ಲಿ, ನ.9: ನೋಟು ನಿಷೇಧದ ಪರಿಣಾಮದ ಬಗ್ಗೆ ಸಂಸದೀಯ ಸಮಿತಿಯು ವಿತ್ತ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದೆ.

ನೋಟು ಉದ್ದೇಶವನ್ನು ಇತರ ವಿಧಾನಗಳಿಂದ ಈಡೇರಿಸಬಹುದಿತ್ತೇ ಎಂಬ ಬಗ್ಗೆ ಅಧಿಕಾರಿಗಳ ಪ್ರತಿಕ್ರಿಯೆನ್ನು ಸಮಿತಿಯು ಕೇಳಿದೆ. ಅಲ್ಲದೆ ಕೇಂದ್ರ ಸಚಿವರ ಹಾಗೂ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿಕೊಂಡು ನೋಟು ನಿಷೇಧದ ಪರಿಣಾಮವನ್ನು ಅಂದಾಜಿಸಲು ನಿರ್ಧರಿಸಿದೆ. ಕೇಂದ್ರ ಸರಕಾರ ಕಳೆದ ವರ್ಷದ ನ.8ರಂದು ಘೋಷಿಸಿದ ನೋಟು ನಿಷೇಧ ದೇಶದ ಅರ್ಥವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರಿದೆ ಎಂಬುದನ್ನು ನಿರ್ಧರಿಸಲು ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ನೇತೃತ್ವದ ಸಂಸದೀಯ ಆರ್ಥಿಕ ಸ್ಥಾಯಿ ಸಮಿತಿಯನ್ನು ನೇಮಿಸಲಾಗಿದೆ. ಆರ್ಥಿಕ ವ್ಯವಹಾರ ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್, ಆರ್ಥಿಕ ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಮತ್ತು ಸಿಬಿಡಿಟಿ ಅಧ್ಯಕ್ಷ ಸುಶೀಲ್‌ಚಂದ್ರ ಗುರುವಾರ ಸಮಿತಿಯೆದುರು ಹಾಜರಾಗಿ ನೋಟು ನಿಷೇಧದ ಹಲವು ಪರಿಣಾಮಗಳನ್ನು ವಿವರಿಸಿದರು ಎಂದು ಮೂಲಗಳು ತಿಳಿಸಿವೆ.

  ನೋಟು ನಿಷೇಧದ ಉದ್ದೇಶವಾಗಿರುವ ಕಾಳಧನ ಪತ್ತೆಹಚ್ಚುವುದು, ಭಯೋತ್ಪಾದಕರಿಗೆ ಹಣಕಾಸಿನ ನೆರವನ್ನು ತಡೆಯುವುದು ಹಾಗೂ ಡಿಜಿಟಲೀಕರಣ ಪಾವತಿ ವ್ಯವಸ್ಥೆಗೆ ಪ್ರೋತ್ಸಾಹ- ಇದನ್ನು ಬೇರೆ ಯಾವುದಾದರೂ ವಿಧಾನದಿಂದ ಈಡೇರಿಸಲು ಸಾಧ್ಯವಿರಲಿಲ್ಲವೇ ಎಂದು ಸಚಿವಾಲಯದ ಅಧಿಕಾರಿಗಳನ್ನು ಸಮಿತಿ ಪ್ರಶ್ನಿಸಿತು. ನೋಟು ನಿಷೇಧದ ಕಾರಣ ವಿಶ್ವದಲ್ಲಿ ಅತ್ಯಂತ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕ ಶಕ್ತಿ ಎಂಬ ಭಾರತದ ಹಿರಿಮೆಗೆ ಘಾಸಿಯಾಗಿದೆ. ‘ಬ್ರಾಂಡ್ ಇಂಡಿಯ’ದ ಮೇಲೆ ವ್ಯತಿರಿಕ್ತ ಪ್ರಭಾವ ಉಂಟಾಗಿದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠಮಟ್ಟವಾದ ಶೇ.5.7ಕ್ಕೆ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದ ಸಮಿತಿಯು, ಕೃಷಿ ಮತ್ತು ವಾಣಿಜ್ಯ ಇಲಾಖೆಯ ಪ್ರತಿನಿಧಿಗಳ ಅಭಿಪ್ರಾಯ ಕೇಳಲು ಹಾಗೂ ನೋಟು ನಿಷೇಧದ ಜಟಿಲ ಪರಿಣಾಮದ ಬಗ್ಗೆ ರಾಜ್ಯ ಸರಕಾರಗಳ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿತು. ನ.16ರಂದು ನಡೆಯಲಿರುವ ಸಮಿತಿಯ ಮುಂದಿನ ಸಭೆಯಲ್ಲಿ ಟೆಲಿಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಡಿಜಿಟಲ್ ಪಾವತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ಇಲಾಖೆಯಲ್ಲಿರುವ ಮೂಲಭೂತ ಸೌಕರ್ಯ ಹಾಗೂ ಇಲಾಖೆಯ ಸಿದ್ಧತೆಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News