×
Ad

ಕೇರಳ ವಿಧಾನಸಭೆಯಲ್ಲಿ ಕೋಲಾಹಲ: ಸರಕಾರದಿಂದ ಸೋಲಾರ್ ಹಗರಣದ ವರದಿ ಮಂಡನೆ

Update: 2017-11-09 20:42 IST

ತಿರುವನಂತಪುರ,ನ.9: ಸೋಲಾರ್ ಹಗರಣ ಕುರಿತ ನ್ಯಾ.ಜಿ.ಶಿವರಾಜನ್ ಆಯೋಗದ ವರದಿಯನ್ನು ಗುರುವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಂಡಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಜನರನ್ನು ವಂಚಿಸಲು ಆರೋಪಿ ಸರಿತಾ ಎಸ್.ನಾಯರ್ ಮತ್ತು ಆಕೆಯ ಕಂಪನಿಗೆ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಮತ್ತು ಅವರ ಸಿಬ್ಬಂದಿಗಳು ಎಲ್ಲ ನೆರವನ್ನು ಒದಗಿಸಿದ್ದರು ಎಂದು ವರದಿಯು ಬೆಟ್ಟು ಮಾಡಿದೆ ಎಂದು ತಿಳಿಸಿದರು.

ಸರಿತಾ ಪತ್ರವೊಂದರಲ್ಲಿ ಎತ್ತಿರುವ ಸಿಆರ್‌ಪಿಸಿ, ಐಪಿಸಿ ಮತ್ತು ಇತರ ಸಂಬಂಧಿತ ನಿಯಮಗಳಡಿಯ ವಿವಿಧ ಆರೋಪಗಳ ತನಿಖೆಗೂ ಆಯೋಗವು ಶಿಫಾರಸು ಮಾಡಿದೆ ಎಂದರು.

ವಿವಿಧ ಪ್ರತಿಪಕ್ಷ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಜೊತೆಗೆ, ಇವರೆಲ್ಲ ಆರೋಪಿಯಿಂದ ಲೈಂಗಿಕ ಸುಖವನ್ನು ಪಡೆದಿದ್ದರು ಎನ್ನುವುದನ್ನು ಆಯೋಗದ ವರದಿಯು ಹೇಳಿದೆ.

 ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆಯೋಗವು ನಿರ್ಧರಿಸಿರುವ ಎಲ್ಲ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಸೇರಿಂದಂತೆ ವಿವಿಧ ಕಾಯ್ದೆಗಳಡಿ ಕಾನೂಕು ಕ್ರಮವನ್ನು ಸರಕಾರವು ಆರಂಭಿಸಲಿದೆ ಎಂದು ವಿಜಯನ್ ತಿಳಿಸಿದರು.

ಆಯೋಗದ ಶಿಫಾರಸುಗಳು ಮತ್ತು ಅದು ಬೆಟ್ಟು ಮಾಡಿರುವ ಅಂಶಗಳನ್ನ ಆಧರಿಸಿ ಸೋಲಾರ್ ಹಗರಣದ ವಿವಿಧ ಮಗ್ಗಲುಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶವೊಂದನ್ನು ಹೊರಡಿಸಲಾಗಿದೆ.

 ವರದಿಯನ್ನು ಮಂಡಿಸಲು ಮುಖ್ಯಮಂತ್ರಿಗಳು ಎದ್ದು ನಿಂತ ತಕ್ಷಣ ಪ್ರತಿಭಟನೆಗಿಳಿದ ಪ್ರತಿಪಕ್ಷ ಸದಸ್ಯರು, ವಿಜಯನ್ ಅವರು ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸುವ ಮೊದಲು ಕಳೆದ ತಿಂಗಳು ಮಾಧ್ಯಮಗಳಿಗೆ ವರದಿಯಲ್ಲಿನ ವಿಷಯಗಳನ್ನು ತಿಳಿಸುವ ಮೂಲಕ ಸದನದ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಆರೋಪಿಸಿದರು. ಆದರೆ ಆರೋಪವನ್ನು ನಿರಾಕರಿಸಿದ ವಿಜಯನ್, ಸುದ್ದಿಗೋಷ್ಠಿಯಲ್ಲಿ ವರದಿಯಲ್ಲಿನ ಅಂಶಗಳ ಬಗ್ಗೆ ತಾನು ಮಾತನಾಡಿರಲಿಲ್ಲ ಮತ್ತು ಆಯೋಗದ ವರದಿಯು ಸಂಪುಟದಲ್ಲಿ ಮಂಡನೆಯದಾಗ ಅದು ಸಾರ್ವಜನಿಕ ದಾಖಲೆಯಾಗಿದೆ ಎಂದು ಹೇಳಿದರು.

ಸರಕಾರವು ಆಯೋಗದ ವರದಿಯನ್ನು ರಾಜಕೀಯ ಪ್ರತೀಕಾರಕ್ಕಾಗಿ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಯಾವುದೇ ಪ್ರಯತ್ನವನ್ನು ತನ್ನ ಪಕ್ಷವು ಪ್ರತಿಭಟಿಸುತ್ತದೆ ಎಂದು ಪ್ರತಿಪಕ್ಷ ನಾಯಕ ರಮೇಶ ಚೆನ್ನಿತಲ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News