ದಾಸ್ಯಕ್ಕೆ ಬಗ್ಗದ ಮನೋಧರ್ಮ ಟಿಪ್ಪುವಿನದ್ದು: ಅರವಿಂದ ಚೊಕ್ಕಾಡಿ

Update: 2017-11-10 09:56 GMT

ಮಂಗಳೂರು, ನ.10: ಹಿಂಸೆಯೇ ಪ್ರಧಾನವಾಗಿದ್ದ ರಾಜರುಗಳ ಆಡಳಿತ ವ್ಯವಸ್ಥೆಯಲ್ಲಿ ದಾಸ್ಯಕ್ಕೆ ತಾನು ಬಗ್ಗುವುದಿಲ್ಲ ಎಂಬ ಮನೋಧರ್ಮದ ಮೂಲಕ ಬ್ರಿಟಿಷರ ವಿರುದ್ಧ ಸೆಟೆದು ನಿಂತವ ಟಿಪ್ಪು ಸುಲ್ತಾನ್ ಎಂದು ಹಿರಿಯ ಚಿಂತಕ, ಲೇಖಕ ಅರವಿಂದ ಚೊಕ್ಕಾಡಿ ಟಿಪ್ಪು ಕುರಿತು ವಿಶ್ಲೇಷಿಸಿದ್ದಾರೆ.

ಅವರು ಇಂದು ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಟಿಪ್ಪು ಕುರಿತು ಸಂದೇಶ ನೀಡಿದರು.

ಟಿಪ್ಪುವಿನ ಆಡಳಿತಾವಧಿಯಲ್ಲಿ, ಅದರಲ್ಲೂ ಮುಖ್ಯವಾಗಿ 1792ರಿಂದ 1799ರವರೆಗಿನ ಆಡಳಿತವನ್ನು ಗಮನಿಸಿದಾಗ ಆತ ದಾಸ್ಯಕ್ಕೆ ತಾನು ಬಗ್ಗುವುದಿಲ್ಲ ಎಂಬ ತಾತ್ವಿಕ ಮನೋಧರ್ಮವನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ. ಆ ತಾತ್ವಿಕ ಮನೋಧರ್ಮವನ್ನು ಗೌರವಿಸುವುದು ಇಂದಿನ ಕಾಲಘಟಕ್ಕೂ ಅಗತ್ಯವಾಗಿದೆ ಎಂದು ಅವರು ಹೇಳಿದರು.

ತುಳುನಾಡಿನ ಉಳ್ಳಾಲದಲ್ಲಿ 1525ರಿಂದ 1570ರ ನಡುವೆ ಇದ್ದಂತಹ ರಾಣಿ ಅಬ್ಬಕ್ಕ ದಾಸ್ಯಕ್ಕೆ ನಾನು ಬಗ್ಗುವುದಿಲ್ಲ ಎಂಬ ಮನೋಧರ್ಮವನ್ನು ಆರಂಭಿಸಿದ್ದರು. ಅದನ್ನು ದೊಡ್ಡ ಪ್ರಮಾಣದಲ್ಲಿ ಎತ್ತಿ ಹಿಡಿದಿದ್ದು ಟಿಪ್ಪು ಸುಲ್ತಾನ್. ಏನೇ ಆದರೂ ನನ್ನ ಮಕ್ಕಳನ್ನಾದರೂ ಒತ್ತೆ ಇಟ್ಟೇನು. ಆದರೆ ದಾಸ್ಯಕ್ಕೆ ಬಗ್ಗುವುದಿಲ್ಲ ಎಂಬ ಮನೋಧರ್ಮದೊಂದಿಗೆ ಬ್ರಿಟಿಷರ ವಿರುದ್ಧ ಸೆಟೆದು ನಿಂತವ ಟಿಪ್ಪು ಸುಲ್ತಾನ್. ಆ ಮನೋಧರ್ಮವನ್ನು ನಾವು ಗೌರವಿಸಬೇಕಾಗಿದೆ. ‘‘ನಿನ್ನೆ ರಾತ್ರಿ ನಾನು ಕನಸು ಕಂಡೆ. ಆ ಕನಸಿನಲ್ಲಿ ನಾನು ಮರಾಠರು ಮತ್ತು ನಿಜಾಮರು ಒಟ್ಟಾಗಿ ಸೇರಿ ಭಾರತದಿಂದ ಬ್ರಿಟಿಷರನ್ನು ಓಡಿಸಿದ ಹಾಗೆ ಕಂಡಿತು’’ ಎಂದು ತನ್ನ ಮಂತ್ರಿಮಂಡಲದ ಜತೆ ಹೇಳಿಕೊಂಡ ಬಗ್ಗೆ ದಾಖಲೆಗಳಿವೆ. ಬಾಂಗ್ಲಾ ದೇಶದ ರಾಜನಿಗೆ ಸ್ವಾತಂತ್ರ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿ ಬರೆದ ಪತ್ರದ ಬಗ್ಗೆ ದಾಖಲೆ ಇದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ, ಅಂದು ಬ್ರಿಟಿಷರ ಅಧೀನದಲ್ಲಿದ್ದ ಮೊಗಲರ ಬಾದಶಹನಿಗೂ ಪತ್ರ ಬರೆದಿದ್ದ. ನಾವೆಲ್ಲಾ ಸೇರಿ ಬ್ರಿಟಿಷರನ್ನು ಓಡಿಸುವ ಎಂದು ಕೋರಿಕೊಂಡಿದ್ದ. ಮೊಗಲ್ ಬಾದ್‌ಶಹ ತನಗೆ ನೆರವು ನೀಡಲು ಸಾಧ್ಯ ಇಲ್ಲ ಎಂಬುದನ್ನು ಯೋಚನೆ ಮಾಡಲಾಗದಷ್ಟು ದಾಸ್ಯದ ವಿರುದ್ಧ ಆತನ ಒಳ ತುಡಿತವಿತ್ತು ಎಂಬುದನ್ನು ಮನಗಾಣಬಹುದಾಗಿದೆ ಎಂದು ಅರವಿಂದ ಚೊಕ್ಕಾಡಿ ವಿಶ್ಲೇಷಿಸಿದರು.

ದಾಸ್ಯಕ್ಕೆ ಬಗ್ಗುವುದಿಲ್ಲವೆಂಬ ಈ ಅಂದಿನವರ ಮನೋಧರ್ಮ ಬೇರೆ ರೀತಿಯಲ್ಲಾಗಿತ್ತು. ಹಾಗಾಗಿಯೇ 1799ರಲ್ಲಿ ಟಿಪ್ಪುವಿನ ಕಾಲಾವಧಿಯಲ್ಲಿ ಯಾವ ಕೆಲಸವನ್ನು ಸಾಧಿಸಲು ಸಾಧ್ಯವಾಗಿಲ್ಲವೋ ಅದನ್ನು 1947 ಸಾಧಿಸಿತು. ಟಿಪ್ಪುವಿನ ಬಳಿಕ ಈ ಹೋರಾಟ ಅಲ್ಲಲ್ಲಿ ಮುಂದುವರಿಯಿತು. ಆದರೆ ಈ ಹೋರಾಟ ರಾಜರಿಗೆ ಮಾತ್ರ ಸೀಮಿತಗೊಂಡಿತ್ತು. ಅದನ್ನು 1885ರಲ್ಲಿ ಆ ಪ್ರಜ್ಞೆಯನ್ನು ಜನರಲ್ಲಿ ಬೆಳೆಸುವಲ್ಲಿ ಬಾಲಗಂಗಾಧರ ತಿಲಕರು ಯಶಸ್ವಿಯಾದರು. ಇದಾದ ಬಳಿಕ ಜನತಾ ಬಂಡಾಯವಾಗಿ ರೂಪಿಸಿದವರು ಮಹಾತ್ಮಾ ಗಾಂಧೀಜಿ. ಟಿಪ್ಪುವಿನ ಕಾಲದಲ್ಲಿ ಯುದ್ಧವೊಂದೇ ಹೋರಾಟದ ವಿಧಾನವಾಗಿತ್ತು. ಹಿಂಸಾತ್ಮಕ ವಿಧಾನವೇ ಹೋರಾಟವಾಗಿತ್ತು. ಬಳಿಕ ಗಾಂಧೀಜಿಯ ಕಾಲಕ್ಕೆ ಅದು ಅಹಿಂಸಾತ್ಮಕ ಹೋರಾಟವಾಗಿ ಪರಿವರ್ತನೆಯಾಯಿತು. ಹೋರಾಟದ ವಿಧಾನದಲ್ಲಿ ವ್ಯತ್ಯಾಸವಾದರೂ ಹೋರಾಟದ ಮನೋಭಾವದಲ್ಲಿ ವ್ಯತ್ಯಾಸವಾಗಿರಲಿಲ್ಲ. ಈ ನೆಲೆಯಲ್ಲಿ ಟಿಪ್ಪುವಿನ ಹೋರಾಟವನ್ನು ನಾವು ನೋಡಬೇಕಾಗಿದೆ ಎಂದು ಅರವಿಂದ ಚೊಕ್ಕಾಡಿ ಹೇಳಿದರು.

ಬಂಟ್ವಾಳದ ಸಮೀಪ ಬ್ರಿಟಿಷರ ಜತೆ ಟಿಪ್ಪುವಿಗೆ ಯುದ್ಧ ಆಗಿತ್ತು. ಬ್ರಿಟಿಷರು ಸೋತಿದ್ದು ಎರಡು ಯುದ್ಧದಲ್ಲಿ. ಪ್ರಥಮ ಆಂಗ್ಲೋ ಯುದ್ಧದಲ್ಲಿ ಸೋತಿದ್ದರು. ಎರಡನೆಯದ್ದು, ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರು ಸೋತಿದ್ದರೂ, ಮಂಗಳೂರು ಒಪ್ಪಂದದ ಮೂಲಕ ಅದು ಮುುಕ್ತಾಯವಾಯಿತು ಎಂದು ಹೇಳಲಾಗುತ್ತದೆ.

ಆಡಳಿತಾತ್ಮಕವಾಗಿ ಹಲವಾರುಸುಧಾರಣೆಗಳನ್ನು ಮಾಡಿದ್ದ ಟಿಪ್ಪುವಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಟಿಪ್ಪುವಿಗೆ ಆಸಕ್ತಿ ಇತ್ತು ಎಂಬುದನ್ನು ಆತ ಅಮೆರಿಕದ ಸ್ವಾತಂತ್ರದ ಬಗ್ಗೆ ತೋರಿದ ಕಾಳಜಿಯನ್ನು ಉಲ್ಲೇಖಿಸಬಹುದು. ಇದೇ ವೇಳೆ ಜಿಜ್ಞಾಸೆ ಮತ್ತು ವೈಚಾರಿಕತೆಯಿಂದ ಕೂಡಿದ ಜ್ಞಾನ ಪರಂಪರೆಯ ಧಾರ್ಮಿಕತೆಗೆ ಟಿಪ್ಪು ಒತ್ತು ನೀಡಿದ್ದ. ಶೃಂಗೇರಿಯ ಶಾರದಾ ಪೀಠ ಜ್ಞಾನ ಪರಂಪರೆಯ ಪ್ರತೀಕ. ಇಂದು ನಮಗೆ ಅಗತ್ಯವಾಗಿರುವುದು ಜ್ಞಾನ ಪರಂಪರೆಯ ವೈಚಾರಿಕ ಸಂವಾದ ಮತ್ತು ಜಿಜ್ಞಾಸೆಯ ಮುಖಾಂತರ ನಾವು ನಮ್ಮ ಉನ್ನತೀಕರಣ ಎಂದು ಅವರು ಹೇಳಿದರು.

ಟಿಪ್ಪು ಮತ್ತು ಮಂಗಳೂರಿನ ನಂಟು!
ಮಂಗಳೂರಿಗೆ ಸಂಬಂಧಿಸಿ ಹೈದರಲಿ ಕೆಲವು ತೆರಿಗೆ ಸುಧಾರಣೆ ತಂದಿರುವ ಬಗ್ಗೆ ಉಲ್ಲೇಖಗಳಿವೆ. ಉಳಿದಂತೆ ಟಿಪ್ಪು ಕಾಲದಲ್ಲಿ ಇದು ಯುದ್ಧ ಭೂಮಿಯಾಗಿಯೇ ಇತ್ತು. ಆ ಕಾಲದಲ್ಲಿ ರಾಜರುಗಳು ನೇರ ಆಡಳಿತಕ್ಕೆ ಕೊಟ್ಟ ಮಹತ್ವವನ್ನು ಅಧೀನ ಪ್ರದೇಶಗಳಿಗೆ ನೀಡುತ್ತಿರಲಿಲ್ಲ. ಲೈಟ್‌ಹೌಸ್ ಬಳಿ ಇರುವ ಮಸೀದಿ ಟಿಪ್ಪು ಕಟ್ಟಿದ್ದಾನೆಂಬ ಉಲ್ಲೇಖವಿದೆ. ಸುಲ್ತಾನ್ ಬತ್ತೇರಿ ಕಾವಲು ಕಾಯುವ ಕೋಟೆಯಾಗಿತ್ತು. ಬೆಳ್ತಂಗಡಿಯ ಜಮಾಲಾಬಾದ್ ಕೋಟೆಯ ಬಗ್ಗೆ ಎರಡು ಉಲ್ಲೇಖಗಳಿವೆ. ಮೊದಲೇ ಇದ್ದ ಕೋಟೆಯನ್ನು ಟಿಪ್ಪು ಜೀರ್ಣೋದ್ಧಾರ ಮಾಡಿದನೆಂಬ ಉಲ್ಲೇಖ ಒಂದಾದರೆ ಮತ್ತೊಂದು ಟಿಪ್ಪುವೇ ಅದನ್ನು ಕಟ್ಟಿದ್ದಾನೆಂಬ ಉಲ್ಲೇಖವಿದೆ. ಹಾಗಿದ್ದರೂ ಟಿಪ್ಪು ಶಸ್ತ್ರಾಸ್ತ್ರ ಸಂಗ್ರಹಕ್ಕಾಗಿ ಆ ಕೋಟೆಯ ಜತೆ ಸಂಬಂಧ ಇರಿಸಿಕೊಂಡಿದ್ದ ಎನ್ನಬಹುದು ಎಂದು ಅರವಿಂದ ಚೊಕ್ಕಾಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News