ಮೋದಿ ಸರಕಾರದ ಆಡಳಿತದ ಬಗ್ಗೆ ಅವಧಿ ಬಳಿಕ ತೀರ್ಮಾನಿಸಿ: ಕೇಂದ್ರ ಸಚಿವ ಚೌಧರಿ
ಕೊಲ್ಕತ್ತಾ, ನ.10: ಮೋದಿ ಸರಕಾರ ಯಾವ ರೀತಿಯ ಆಡಳಿತ ನೀಡಿದೆ ಎಂಬ ಬಗ್ಗೆ ಅದರ ಆಡಳಿತ ಅವಧಿ ಮುಗಿದ ನಂತರವೇ ತೀರ್ಮಾನಿಸಬೇಕು ಎಂದು ಕೇಂದ್ರ ಸಚಿವ ಹರಿಬಾಯಿ ಪಾರ್ಥಿಬಾಯಿ ಚೌಧರಿ ತಿಳಿಸಿದ್ದಾರೆ. ಹಿಂದೂಸ್ಥಾನ್ ಕೋಪರ್ ಲಿಮಿಟೆಡ್ (ಎಚ್‌ಸಿಎಲ್)ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವರಾಗಿರುವ ಚೌಧರಿ ಕೇಂದ್ರ ಸರಕಾರ ತನ್ನ ಕೆಲಸ ಮಾಡಲು ಸಾಕಷ್ಟು ಸಮಯಾವಕಾಶ ನೀಡಬೇಕು ಎಂದು ಹೇಳಿದರು.
ನೋಟು ಅಮಾನ್ಯ ಮತ್ತು ಜಿಎಸ್‌ಟಿ ಜಾರಿಯನ್ನು ವಿರೋಧಿಸಿ ಪ್ರತಿಪಕ್ಷಗಳು ಸರಕಾರದ ವಿರುದ್ಧ ಮಾಡುತ್ತಿರುವ ಟೀಕೆಗಳಿಗೆ ಉತ್ತರವಾಗಿ ಅವರು ಈ ಮಾತನ್ನಾಡಿದರು. ಹಾಲು ಮೊಸರಾಗಬೇಕಾದರೆ ಅದಕ್ಕೆ ಹನ್ನೆರಡು ಗಂಟೆಗಳ ಸಮಯ ನೀಡಬೇಕಾಗುತ್ತದೆ. ಪ್ರತೀ ಗಂಟೆಗೊಮ್ಮೆ ಅದನ್ನು ತೆರೆದು ನೋಡುತ್ತಾ ಇದ್ದರೆ ಮೊಸರು ತಯಾರಾಗಲು ಸಾಧ್ಯವಿಲ್ಲ ಎಂದು ಚೌಧರಿ ಹೇಳಿದರು.
ಕೇಂದ್ರ ಸರಕಾರವು 2014ರ ಲೋಕಸಭೆ ಚುನಾವಣೆಯ ವೇಳೆ ನೀಡಿದ್ದಂತಹ ಅಚ್ಛೇದಿನ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಮತ್ತು ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯನ್ನು ತರಾತುರಿಯಲ್ಲಿ ಯಾವುದೇ ಮುಂದಾಲೋಚನೆಯಿಲ್ಲದೆ ಜಾರಿ ಮಾಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಎಲ್ಲಾ ಯೋಜನೆಗಳಿಂದ ಮೊದಲಿಗೆ ಸ್ವಲ್ಪ ಕಷ್ಟಗಳು ಎದುರಾಗಿರುವುದು ಸುಳ್ಳಲ್ಲ ಆದರೆ ಇವುಗಳಿಂದ ದೀರ್ಘಕಾಲಿಕ ಲಾಭವಾಗಲಿದೆ ಎಂದು ಚೌಧರಿ ತಿಳಿಸಿದರು. ಹಿಂದಿನ ಮೈತ್ರಿ ಸರಕಾರಗಳ ಸಮಯದಲ್ಲಿ ಮೈತ್ರಿಪಕ್ಷಗಳು ಕೇಂದ್ರ ಸರಕಾರವನ್ನು ಸರಿಯಾಗಿ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಆದರೆ ಈಗ ಬಿಜೆಪಿ ಸರಕಾರ ಈ ಮೂರು ವರ್ಷಗಳಲ್ಲಿ 800 ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದು ಅವರು ವಿವರಿಸಿದರು.
2024ರ ಹೊತ್ತಿಗೆ ಭಾರತವು ಒಂದು ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದ ಅವರು, 2019ರ ಹೊತ್ತಿಗೆ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕ ಕ್ಷೇತ್ರದ ಉದ್ಯೋಗಿಗಳು ತಮ್ಮ ಕೆಲಸದ ಮೂಲಕ ದೇಶ ಸೇವೆ ಮಾಡಬೇಕು ಮತ್ತು ಸಾರ್ವಜನಿಕ ಕ್ಷೇತ್ರದ ಅಭಿವೃದ್ಧಿಗೆ ಕಾಣಿಕೆ ನೀಡಬೇಕು ಎಂದು ಮನವಿ ಮಾಡಿದ ಚೌಧರಿ, ಉತ್ಪಾದನೆಯನ್ನು ನಾಲ್ಕು ಪಟ್ಟು ಹೆಚ್ಚುಗೊಳಿಸುವ ಎಚ್‌ಸಿಎಲ್ ನ ಯೋಜನೆಯು ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿದೆ ಎಂದು ವಿವರಿಸಿದರು. ಎಚ್‌ಸಿಎಲ್ ಗಣಿ ವಿಸ್ತಾರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಉತ್ಪಾದನೆಯನ್ನು 3.4 ಮಿಲಿಯನ್ ಟನ್‌ಗಳಿಂದ 12.4 ಮಿಲಿಯನ್ ಟನ್ ಗೆ ಏರಿಸಲಾಗುವುದು. ಇದಕ್ಕೆ 700 ಮಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಎಚ್‌ಸಿಎಲ್ ಸಿಎಂಡಿ ಸಂತೋಷ್ ಶರ್ಮಾ ತಿಳಿಸಿದರು.
ಇದರಿಂದಾಗಿ ಭಾರತ ಆಂತರಿಕ ಉಪಯೋಗಕ್ಕಾಗಿ ಮಾಡಿಕೊಳ್ಳುತ್ತಿರುವ ತಾಮ್ರದ ಆಮದಿನಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ವಿವರಿಸಿದರು.