ಪ್ರಧಾನಿಯನ್ನು ಭೇಟಿಯಾದ 17 ವರ್ಷದೊಳಗಿನ ಫುಟ್ಬಾಲ್ ತಂಡ
ಹೊಸದಿಲ್ಲಿ, ನ.10: ಭಾರತದ ಕ್ರೀಡಾ ಇತಿಹಾಸದಲ್ಲಿ ಮೊದಲ ಬಾರಿ ಫಿಫಾ ವಿಶ್ವಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ ಅಂಡರ್-17 ಫುಟ್ಬಾಲ್ ತಂಡ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದೆ.
ಎಎಫ್‌ಸಿ ಅಂಡರ್-19 ಚಾಂಪಿಯನ್‌ಶಿಪ್ ಕ್ವಾಲಿಫೈಯರ್‌ನಲ್ಲಿ ಭಾಗವಹಿಸಿ ಸೌದಿ ಅರೇಬಿಯದಿಂದ ವಾಪಸಾಗಿರುವ ಭಾರತದ ಅಂಡರ್-17 ಫುಟ್ಬಾಲ್ ತಂಡಕ್ಕೆ ಪ್ರಧಾನಿ ಆಹ್ವಾನ ನೀಡಿದ್ದರು.
‘‘ನಾನು ನಿಮ್ಮ ಎಲ್ಲರ ಕಣ್ಣಲ್ಲಿ ಕಾಂತಿ ಕಾಣುತ್ತಿದ್ದೇನೆ. ನಿಮ್ಮ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಹೀಗಾಗಿ ನಿಮ್ಮ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ’’ ಎಂದು ಮೋದಿ ಹೇಳಿದರು.
‘‘ಅಂಡರ್-17 ವಿಶ್ವಕಪ್ ಭವಿಷ್ಯದ ತಯಾರಿಯಾ ಗಿದೆ. ನೀವೆಲ್ಲರೂ ಒಗ್ಗಟ್ಟಾಗಿ ತಂಡವಾಗಿ ಆಡಿದರೆ 5ರಿಂದ 7 ವರ್ಷಗಳಲ್ಲಿ ದೇಶಕ್ಕೆ ಹೆಮ್ಮೆ ತರಬಹುದು. ಕ್ರೀಡೆಯಿಲ್ಲದೆ ಜೀವನವಿಲ್ಲ. ಫುಟ್ಬಾಲ್ ತುಂಬಾ ತೀವ್ರತೆಯಿರುವ ಪಂದ್ಯ. ಜನರು ತಮ್ಮ ದೈನಂದಿನ ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಳ್ಳಲು ನೀವು ಸ್ಫೂರ್ತಿಯಾಗುವ ವಿಶ್ವಾಸ ನನ ಗಿದೆ’’ ಎಂದು ಮೋದಿ ನುಡಿದರು.
ಅ.6 ರಂದು ಹೊಸದಿಲ್ಲಿಯ ಜೆಎಲ್‌ಎನ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಅಮೆರಿಕ ನಡುವೆ ನಡೆದಿದ್ದ ಫಿಫಾ ಅಂಡರ್-17 ವಿಶ್ವಕಪ್‌ನ್ನು ಪ್ರಧಾನಿ ಮೋದಿ ವೀಕ್ಷಿಸಿದ್ದರು.
‘‘ಕೊಲಂಬಿಯಾ ವಿರುದ್ಧ ಭಾರತ ಆಡಿರುವ ಎರಡನೆ ಲೀಗ್ ಪಂದ್ಯದಲ್ಲಿ ಜೀಕ್ಸನ್ ಬಾರಿಸಿದ್ದ ಗೋಲು ಎಲ್ಲರಿಗೂ ಹೆಮ್ಮೆ ಉಂಟು ಮಾಡಿತ್ತು’’ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.