×
Ad

ಮಹಿಳೆಯರನ್ನು ಗೌರವಿಸದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಅಗತ್ಯ: ನ್ಯಾಯಾಲಯ

Update: 2017-11-10 23:34 IST

ಹೊಸದಿಲ್ಲಿ, ನ.10: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ ಜೈಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವೊಂದು, ಮಹಿಳೆಯರನ್ನು ಗೌರವಿಸದ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯೇ ಸರಿಯಾದ ಮದ್ದು ಎಂದು ತಿಳಿಸಿದೆ.

 2015ರಲ್ಲಿ ದಿಲ್ಲಿಯ ನಗರಪಾಲಿಕೆ ಅಧೀನದ ಶೌಚಾಲಯಕ್ಕೆ ತೆರಳಿದ್ದ ವಿವಾಹಿತ ಮಹಿಳೆಯೋರ್ವಳನ್ನು ಅಡ್ಡಗಟ್ಟಿದ್ದ ವೀರೇಂದ್ರ ಕುಮಾರ್ ಎಂಬಾತ ಆಕೆಯೊಡನೆ ಅನುಚಿತವಾಗಿ ವರ್ತಿಸಿ ಲೈಂಗಿಕ ಪೀಡನೆ ನೀಡಿದ್ದ . ತಾನು ಅವಳನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದ ಆತ ಯಾರಲ್ಲಾದರೂ ತಿಳಿಸಿದರೆ ಮುಖಕ್ಕೆ ಆ್ಯಸಿಡ್ ಎರಚುವುದಾಗಿ ಬೆದರಿಸಿದ್ದ ಎನ್ನಲಾಗಿದೆ. ಆತನ ಹಿಡಿತದಿಂದ ತಪ್ಪಿಸಿಕೊಂಡ ಮಹಿಳೆ ತನ್ನ ಪತಿಯಲ್ಲಿ ವಿಷಯ ತಿಳಿಸಿದ ಬಳಿಕ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.

ಬಳಿಕ ವೀರೇಂದ್ರ ಕುಮಾರ್‌ನನ್ನು ಬಂಧಿಸಿ ಆತನ ಮೇಲೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. ಈತನಿಗೆ ಸ್ಥಳೀಯ ನ್ಯಾಯಾಲಯವೊಂದು ಒಂದು ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ವೀರೇಂದ್ರ ಕುಮಾರ್ ನಗರದ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಸಂದೀಪ್ ಯಾದವ್, ಮಹಿಳೆಯರನ್ನು ಗೌರವಿಸದ ವ್ಯಕ್ತಿಗಳಿಗೆ ಕಠೋರ ಶಿಕ್ಷೆಯಾಗಲೇಬೇಕು ಎಂದು ತಿಳಿಸಿದರು ಹಾಗೂ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದರು. ಅಲ್ಲದೆ ದಂಡದ ಮೊತ್ತವಾದ 10,000 ರೂ.ಯನ್ನು ಸಂತ್ರಸ್ತೆ ಮಹಿಳೆಗೆ ನೀಡಬೇಕೆಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News