ಎರಡು ಟೆಸ್ಟ್ ಗಳಿಂದ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ

Update: 2017-11-10 18:13 GMT

ಮುಂಬೈ, ನ.10: ಶ್ರೀಲಂಕಾ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ 15 ಮಂದಿ ಸದಸ್ಯರ ಟೀಮ್ ಇಂಡಿಯಾವನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಬಿಡುವಿಲ್ಲದ ಕ್ರಿಕೆಟ್‌ನಿಂದಾಗಿ ಪಾಂಡ್ಯ ಬಳಲಿದ್ದಾರೆ. ಈ ಕಾರಣದಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಹಾರ್ದಿಕ್ ಪಾಂಡ್ಯ ಬದಲಿಗೆ ಯಾರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿಲ್ಲ.

 ತಿರುವನಂತಪುರದಲ್ಲಿ ನಡೆದ ಮಳೆ ಬಾಧಿತ ಟ್ವೆಂಟಿ-20 ಪಂದ್ಯದಲ್ಲಿ ಪಾಂಡ್ಯ ಅವರು ಫೀಲ್ಡಿಂಗ್ ವೇಳೆ ಚೆಂಡನ್ನು ತಡೆಯುವ ಯತ್ನದಲ್ಲಿ ಗಾಯ ಮಾಡಿಕೊಂಡಿದ್ದರು. ಆದರೆ ಪಾಂಡ್ಯ ಅವರು ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಬಗ್ಗೆ ಬಿಸಿಸಿಐ ಏನನ್ನು ಹೇಳಿಲ್ಲ.

 ಟ್ವೆಂಟಿ-20 ಸರಣಿ ಮುಕ್ತಾಯದ ಮೊದಲು ಟೆಸ್ಟ್‌ಗೆ ಆಯ್ಕೆ ಮಾಡಲಾದ ಅಟಗಾರರ ಪಟ್ಟಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರಿತ್ತು. ಆದರೆ ಇದೀಗ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ರಾಷ್ಟ್ರೀಯ ಅಯ್ಕೆ ಸಮಿತಿಯು ಕ್ರಿಕೆಟ್ ಆಡಳಿತ ಸಮಿತಿಯೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಪಾಂಡ್ಯ ಅವರು ಬಿಡುವಿಲ್ಲದ ಕ್ರಿಕೆಟ್‌ನಿಂದ ಗಾಯದ ಸಮಸ್ಯೆಗೆ ಒಳಗಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಅವಧಿಯಲ್ಲಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ.

ಕಳೆದ ಜೂನ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಬಳಿಕ ಪಾಂಡ್ಯ 3 ಟೆಸ್ಟ್,22 ಏಕದಿನ ಮತ್ತು 5 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಅಡಿದ್ದಾರೆ.

 ಶ್ರೀಲಂಕಾ ತಂಡ ಬಲಿಷ್ಠ ತಂಡವಲ್ಲ. ಈ ಕಾರಣದಿಂದಾಗಿ ಟೀಮ್ ಇಂಡಿಯಾ ಮೂರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿದೆ. ಆರ್.ಅಶ್ವಿನ್, ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ತಂಡದಲ್ಲಿರುವ ತಜ್ಞ ಸ್ಪಿನ್ ಬೌಲರ್‌ಗಳು.ಈ ಕಾರಣದಿಂದಾಗಿ ಆಲ್‌ರೌಂಡರ್‌ಗಳ ಆವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿದ್ದ ಪಾಂಡ್ಯ ಅವರು 178 ರನ್ ದಾಖಲಿಸಿದ್ದರು. 1 ಶತಕ ಮತ್ತು 1 ಅರ್ಧಶತಕ ದಾಖಲಿಸಿದ್ದರು.

ಭಾರತ : ವಿರಾಟ್ ಕೊಹ್ಲಿ(ನಾಯಕ), ಲೋಕೇಶ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್,ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ರೋಹಿತ್ ಶರ್ಮ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಇಶಾಂತ್ ಶರ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News