ನಾಡಾ ಮನವಿಯನ್ನು ತಿರಸ್ಕರಿಸಿದ ಬಿಸಿಸಿಐ

Update: 2017-11-10 18:17 GMT

ಹೊಸದಿಲ್ಲಿ, ನ.10: ಭಾರತೀಯ ಕ್ರಿಕೆಟಿಗರನ್ನು ಡೋಪಿಂಗ್ ಟೆಸ್ಟ್‌ಗೆ ಒಳಪಡಿಸಲು ಸಹಕಾರ ನೀಡುವಂತೆ ರಾಷ್ಟ್ರೀಯ ಉದ್ದೀಪನಾ ನಿಗ್ರಹ ಘಟಕ(ನಾಡಾ)ಮಾಡಿರುವ ಮನವಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ತಿರಸ್ಕರಿಸಿದೆ.

  ಬಿಸಿಸಿಐಯು ರಾಷ್ಟ್ರೀಯ ಕ್ರೀಡಾ ಒಕ್ಕೂಟದ(ಎನ್‌ಎಸ್‌ಎಫ್) ಅಧೀನ ಕ್ಕೊಳಪಟ್ಟಿಲ್ಲ. ಈ ಕಾರಣದಿಂದಾಗಿ ಭಾರತೀಯ ಕ್ರಿಕೆಟಿಗರನ್ನು ಡೋಪಿಂಗ್ ಟೆಸ್ಟ್‌ಗೊಳಪಡಿಸುವ ವಿಚಾರ ನಾಡಾದ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೋಹ್ರಿ ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದ ನೇಮಕ ಮಾಡಲಾದ ಅಡಳಿತ ಸಮಿತಿಯ ಸೂಚನೆಯಂತೆ ಬಿಸಿಸಿಐ ಸಿಇಒ ಜೋಹ್ರಿ ಅವರು ಹೇಳಿಕೆ ನೀಡಿದ್ದಾರೆ.

 ನಾಡಾದ ಮುಖ್ಯಸ್ಥ ನವೀನ್ ಅಗರ್‌ವಾಲ್ ಅವರು ನ.8ರಂದು ಬರೆದ ಪತ್ರದಲ್ಲಿ ಬಿಸಿಸಿಐ ಆಯೋಜಿಸುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರನ್ನು ಡೋಪಿಂಗ್ ಟೆಸ್ಟ್‌ಗೆ ಒಳಪಡಿಸುವ ವಿಚಾರವನ್ನು ಸ್ಪಷ್ಟಪಡಿಸುವಂತೆ ವಿನಂತಿಸಿದ್ದರು.

 ವಾಡಾ ಸೂಚನೆಯಂತೆ ಕಳೆದ ಅಕ್ಟೋಬರ್‌ನಲ್ಲಿ ನಾಡಾ ಕೇಂದ್ರ ಕ್ರೀಡಾ ಸಚಿವಾಲಯದ ಮೊರೆ ಹೋಗಿ ಕ್ರಿಕೆಟಿಗರನ್ನು ಡೋಪಿಂಗ್ ಪರೀಕ್ಷೆಗೊಳಪಡಿಸಲು ನಾಡಾಕ್ಕೆ ಸಹಕಾರ ನೀಡಲು ಬಿಸಿಸಿಐಗೆ ಸೂಚಿಸುವಂತೆ ಮನವಿ ಮಾಡಿತ್ತು.

  ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ನಿಯಮಾವಳಿಗೊಳಪಟ್ಟು ಕಾರ್ಯಾಚರಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೋಹ್ರಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News