‘ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಪುನರಾರಂಭಕ್ಕೆ ಐಸಿಸಿ ವಿಫಲ’

Update: 2017-11-10 18:28 GMT

ಲಾಹೋರ್, ನ.10: ‘‘ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಪುನರಾರಂಭಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಯಾವುದೇ ಪ್ರಯತ್ನ ನಡೆಸಿಲ್ಲ. ಐಸಿಸಿಗೆ ಅಂತಹ ಅಧಿಕಾರ ಇದೆ ಎಂದು ತನಗನಿಸುತ್ತಿಲ್ಲ’’ ಎಂದು ಪಾಕ್‌ನ ಮಾಜಿ ನಾಯಕ ವಸೀಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

‘‘ಪಾಕಿಸ್ತಾನ ಹಾಗೂ ಭಾರತದ ಯುವ ಆಟಗಾರರಿಗೆ ಪರಸ್ಪರ ಆಡಲು ಸಾಧ್ಯವಾಗುತ್ತಿಲ್ಲ. ಭಾರತ-ಪಾಕಿಸ್ತಾನ ಸರಣಿಗಾಗಿ ಉಪಕ್ರಮ ಕೈಗೊಳ್ಳಲು ಐಸಿಸಿ ವಿಫಲವಾಗಿದ್ದು, ಉಭಯ ತಂಡಗಳು ರಾಜಕೀಯದಿಂದ ದೂರ ಇರಬೇಕು. ರಾಜಕೀಯ ಹಾಗೂ ಕ್ರೀಡೆಯನ್ನು ಪ್ರತ್ಯೇಕವಾಗಿಡಬೇಕು’’ ಎಂದು ಜಿಯೋ ಟಿವಿಗೆ ಅಕ್ರಂ ತಿಳಿಸಿದ್ದಾರೆ.

 ‘‘ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವೆ ನಡೆಯುವ ಆ್ಯಶಸ್ ಸರಣಿಗಿಂತಲೂ ಭಾರತ-ಪಾಕ್ ನಡುವೆ ನಡೆಯುವ ಪಂದ್ಯ ಹೆಚ್ಚು ಕುತೂಹಲಕಾರಿಯಾಗಿರುತ್ತದೆ. ಆ್ಯಶಸ್‌ಗಿಂತಲೂ ಭಾರತ-ಪಾಕ್ ನಡುವಿನ ಪಂದ್ಯ ವೀಕ್ಷಿಸುವ ಅಭಿಮಾನಿಗಳ ಸಂಖ್ಯೆ ಅಧಿಕವಿದೆ’’ಎಂದು 356 ಏಕದಿನ ಪಂದ್ಯಗಳಲ್ಲಿ 502 ವಿಕೆಟ್‌ಗಳನ್ನು ಕಬಳಿಸಿದ್ದ ಅಕ್ರಂ ಹೇಳಿದರು.

ಬಿಸಿಸಿಐ 2014ರಲ್ಲಿ ಪಾಕಿಸ್ತಾನದೊಂದಿಗೆ ಆರು ದ್ವಿಪಕ್ಷೀಯ ಸರಣಿ ಆಡಲು ಸಮ್ಮತಿಸಿತ್ತು. ಉಭಯ ದೇಶಗಳ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ಕಾರಣ ಬಿಸಿಸಿಐ ತಾನು ಒಪ್ಪಿಕೊಂಡಿರುವ ಯಾವುದೇ ಸರಣಿಯನ್ನು ಪಾಕಿಸ್ತಾನ ವಿರುದ್ಧ ಆಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News