ರಸಗೊಬ್ಬರ ಉತ್ಪಾದನಾ ಕಾರ್ಖಾನೆ ಸ್ಥಾಪನೆ: ರಾಜೇಂದ್ರ ಕುಮಾರ್

Update: 2017-11-11 11:54 GMT

ಉಡುಪಿ, ನ.11: ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ವತಿಯಿಂದ ರಸಗೊಬ್ಬರ ಉತ್ಪಾದನಾ ಕಾರ್ಖಾನೆಯನ್ನು ಸ್ಥಾಪಿಸುವ ಚಿಂತನೆ ನಡೆಯುತ್ತಿದೆ ಎಂದು ಮಹಾಮಂಡಲದ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಸಮಸ್ತ ಸಹಕಾರಿ ಬಂಧುಗಳ ವತಿಯಿಂದ ಶನಿವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಆವರಣದಲ್ಲಿ ಆಯೋಜಿಸ ಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿ ದ್ದರು. ಇದಕ್ಕಾಗಿ ಕೇಂದ್ರ ಸರಕಾರವು 3 ಎಕರೆ ಭೂಮಿ, ಅನುದಾನ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಿದೆ. ಅದೇ ರೀತಿ ಕುಂದಾಪುರದಲ್ಲಿ ಶೀಘ್ರವೇ ರಸಗೊಬ್ಬರ ವಿತರಣಾ ಕೇಂದ್ರವನ್ನು ಆರಂಭಿಸ ಲಾಗುವುದು ಎಂದರು.

ನವೋದಯ ಸ್ವಸಹಾಯ ಸಂಘದಿಂದ ಪುರುಷ ದಬ್ಬಾಳಿಕೆ ಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗಿದೆ. ಈ ವರ್ಷ ಎಲ್ಲ ಸಹಕಾರಿ ಸಂಸ್ಥೆಗಳ ಜೊತೆ ಸೇರಿಕೊಂಡು ಸ್ವಸಹಾಯ ಸಂಘದ ಎಲ್ಲ ಮಹಿಳೆಯರಿಗೆ ಹೊಸ ಸಮವಸ್ತ್ರವಾಗಿ ಸೀರೆಯನ್ನು ಈ ವರ್ಷದೊಳಗೆ ನೀಡಲು ಪ್ರಯತ್ನಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಪತ್ನಿ ಅರುಣಾ ರಾಜೇಂದ್ರ ಕುಮಾರ್ ಹಾಗೂ ರಾಷ್ಟ್ರೀಯ ಡೈರಿ ಎಕ್ಸಲೆನ್ಸಿ ಪ್ರಶಸ್ತಿ ಪುರಸ್ಕೃತ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಮತ್ತು ಪತ್ನಿ ವಿನಯ ರವಿರಾಜ್ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು.

ಸಮಾರಂಭವನ್ನು ಉದ್ಘಾಟಿಸಿದ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಹಕಾರಿ ಕ್ಷೇತ್ರವು ಸಾಕಷ್ಟು ಅಭಿವೃದ್ದಿ ಪಥದಲ್ಲಿ ಸಾಗುವಲ್ಲಿ ಇವರಿಬ್ಬರು ಸಾಕ್ಷಿಗಳಾಗಿದ್ದಾರೆ. ಈ ಕ್ಷೇತ್ರವು ಇನ್ನಷ್ಟು ಬಲಿಷ್ಠವಾಗಲಿ ಎಂದು ಹಾರೈಸಿದರು.

ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ರೈತರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸದ ಶಕ್ತಿ ತುಂಬಿದ ಸಹಕಾರಿ ಕ್ಷೇತ್ರವು ಸಂಸ್ಥೆಯ ಅಭಿವೃದ್ಧಿಯ ಜೊತೆ ಸದಸ್ಯರು ಕೂಡ ಆರ್ಥಿಕವಾಗಿ ಸದೃಢವಾಗುವಂತೆ ಮಾಡಿದೆ. ಸಹಕಾರಿ ರಂಗ ಯಾವುದೇ ರಾಜಕೀಯ ಇಲ್ಲದೆ ಮುಂದುವರೆಯುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರಳಾ ಬಿ.ಕಾಂಚನ್, ಜಿಲ್ಲಾ ಸಹಕಾರ ಸಂಘಗಳ ನಿಬಂಧಕ ಪ್ರವೀಣ್ ಬಿ. ನಾಯಕ್, ಉಪನಿಬಂಧಕಿ ಚಂದ್ರಪ್ರತಿಮಾ, ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕೃಷ್ಣರಾಜ್ ಸರಳಾಯ, ಹರೀಶ್ ಆಚಾರ್ ಉಪಸ್ಥಿತರಿದ್ದರು.

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಅಭಿನಂದನಾ ಭಾಷಣ ಮಾಡಿದರು. ಬೆಳಪು ಸಿಎ ಬ್ಯಾಂಕ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೆಮ್ಮಣ್ಣು ವಂದಿಸಿದರು. ಅಣ್ಣಯ್ಯ ಸೇರಿಗಾರ್ ಹಾಗೂ ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಅಜ್ಜರಕಾಡು ಪುರಭವನ ದಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News