ಸಿದ್ದರಾಮಯ್ಯ ಸರಕಾರಕ್ಕೆ ತಾಕತ್ತಿದ್ದರೆ ಮುಂಜಿ ನಿಷೇಧಿಸುವ ಮಸೂದೆ ಜಾರಿಗೆ ತರಲಿ: ಕೆ.ಎಸ್. ಈಶ್ವರಪ್ಪ

Update: 2017-11-11 13:05 GMT

ಬಂಟ್ವಾಳ, ನ. 11: ಈ ಯಾತ್ರೆ ತನ್ನನ್ನು ಮುಖ್ಯಮಂತ್ರಿಯನ್ನಾಗಿಸುವ ಯಾತ್ರೆ ಅಲ್ಲ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಕ್ಕಾಗಿ ಹಮ್ಮಿಕೊಂಡಿರುವ ಯಾತ್ರೆಯಾಗಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅವರು ಬಿ.ಸಿ.ರೋಡ್‌ನ ಸರ್ಕಸ್ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಾನು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಪಂಪ್‌ಸೆಟ್ ವಿತರಣೆ, ಸುವರ್ಣ ಯೋಜನೆ, ಸುವರ್ಣ ಗ್ರಾಮೀಣ ಯೋಜನೆ, ಬೈಸಿಕಲ್, ವೃದ್ಧಾಪ್ಯ ವೇತನ, ವಿಧವಾ ಯೋಜನೆಯಂತಹ ಇನ್ನಿತರ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇನೆ. ಅದೇ ರೀತಿ ತನ್ನ ಮನಸ್ಸಿನಲ್ಲಿ ಇನ್ನೂ ಹಲವು ಯೋಜನೆಗಳು ಹಾಗೇಯೆ ಉಳಿದಿವೆ. ಆ ಯೋಜನೆಗಳನ್ನು ತಾನು ಹೇಳಿದರೆ ಬುರುಡೆ ದಾಸಯ್ಯ ಸಿದ್ದರಾಮಯ್ಯ ಅವರು ತಾನೇ ಮಾಡಿದ್ದು ಎಂದು ಕೊಚ್ಚಿಕೊಳ್ಳುತ್ತಾರೆ ಎಂದು ಹೇಳಿದರು.

ಹಣದ ಅಪಮೌಲ್ಯ, ಜಿಎಸ್‌ಟಿ ಹಾಗೂ ಡಿಜಿಟಲ್ ಈ ಮೂರು ವಿಷಯಗಳ ಬಗ್ಗೆ ಮೋದಿ ಅವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವ ಕ್ಷುಲ್ಲಕ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ. ಪ್ರಧಾನಿ ಮೋದಿ ಅವರು 3 ವರ್ಷಗಳಲ್ಲಿ ಆರ್ಥಿಕವಾಗಿ 142 ಸ್ಥಾನದಲ್ಲಿದ್ದ ಭಾರತವನ್ನು 100ನೇ ಸ್ಥಾನಕ್ಕೆ ಏರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆ ಮಾಡುವ ಮೂಲಕ 50ನೇ ಸ್ಥಾನ ಪಡೆಯಲಿದೆ ಎಂದು ಹೇಳಿದರು.

ಬೇನಾಮಿ ಮಸೂದೆ ಜಾರಿಯಾಗುತ್ತಿದ್ದು, ಇದರಿಂದ ಕಾಂಗ್ರೆಸ್ಸಿಗರು ನಿದ್ದೆಗೆಟ್ಟಿದ್ದಾರೆ. ಬೇನಾಮಿ ಆಸ್ತಿ ಹಾಗೂ ಕಾಳಧನ ಹೊಂದಿದವರು ಬೀದಿಗೆ ಬರುತ್ತಿದ್ದಾರೆ ಹಾಗೂ ಇನ್ನೂ ಕೆಲವರು ಬರುವವರಿದ್ದಾರೆ. ಇದರಿಂದ ಕಾಂಗ್ರೆಸ್ ಮುಖಂಡರು ತಳಮಳಗೊಂಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮಾತನಾಡಿ, ತನ್ನ ಮೈಯಲ್ಲಿ ಭಕ್ತ ಕನಕದಾಸರ ರಕ್ತ ಹರಿಯುತ್ತಾ ಇದೆ. ಸಿದ್ದರಾಮಯ್ಯ ಅವರ ಮೈಯಲ್ಲಿ ಟಿಪ್ಪು ಸುಲ್ತಾನರ ರಕ್ತ ಹರಿಯುತ್ತದೆ. ಇದರಿಂದ ಸಿದ್ದರಾಮಯ್ಯ ಅವರು ಕುಲ ಕುಲಕ್ಕೆ ಬೆಂಕಿ ಹಚ್ಚುವ ಮೂಲಕ ಹಿಂದೂ ಹಾಗೂ ಮುಸ್ಲಿಮರನ್ನು ಒಡೆದು ಆಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನು ಟಿಪ್ಪು ಸುಲ್ತಾನ್ ಎಂದು ಬದಲಿಸಿಕೊಳ್ಳಲಿ ಎಂದು ಹೇಳಿದರು.

ಆರೆಸ್ಸೆಸ್ ಹಾಗೂ ಬಿಜೆಪಿಯನ್ನು ಮಟ್ಟಹಾಕುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿಮ್ಮ ಯಾರೇ ನಾಯಕರು ಬಂದರೂ ನಮ್ಮನ್ನು ಮಟ್ಟ ಹಾಕಲು ಸಾಧ್ಯವಿಲ್ಲ ಎಂದು ಗುಡುಗಿದರು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಅನೇಕ ಭಕ್ತಾಧಿಗಳು ಭಕ್ತಿಯಿಂದ ಮೈಯಲ್ಲಿ ಮುದ್ರೆಯನ್ನು ಒತ್ತುತ್ತಿದ್ದಾರೆ. ಆ ಮುದ್ರೆಯನ್ನು ಒತ್ತಬಾರದು ಅದರಿಂದ ಶರೀರಕ್ಕೆ ಬಿಸಿಯಾಗುತ್ತದೆ ಎಂದು ಮಸೂದೆಯಲ್ಲಿ ತರುತ್ತಾರೆ. ನಿಮಗೆ ತಾಕತ್ತಿದ್ದರೆ ಮುಸಲ್ಮಾನರು ಮಾಡುವ ಮುಂಜಿಯನ್ನು ನಿಷೇಧಿಸುವ ಮಸೂದೆಯನ್ನು ಜಾರಿಗೆ ತನ್ನಿ. ಇದಕ್ಕೆ ನಾವೂ ಕೂಡಾ ನಿಮ್ಮ ಜೊತೆ ಕೈಜೋಡಿಸುತ್ತೇವೆ. ಹಿಂದೂ ಭಕ್ತರು ತ್ರಿಶೂಲ ಚುಚ್ಚಿದರೆ ನೋವಾಗುತ್ತದೆ ಎಂದು ಹೇಳುವ ನಿಮಗೆ ಮುಸ್ಲಿಮರು ಮಾಡುವ ಮುಂಜಿಯಿಂದ ನೋವಾಗುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಧರ್ಮ ವಿರೋಧಿ, ದೈವ ವಿರೋಧಿ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿರುವುದು ನಮಗೆಲ್ಲರಿಗೆ ಅಪಮಾನ ಎಂದರು.

ಸಿದ್ದರಾಮಯ್ಯ ಸರಕಾರ ಮೂಢನಂಬಿಕೆ ಮಸೂದೆಯನ್ನು ಜಾರಿ ತರುವ ಮೂಲಕ ಹಿಂದೂಗಳ ಆಚರಣೆಗೆ ತೊಂದರೆ ಮಾಡುತ್ತಿದೆ. ನಿಮಗೆ ದೇವರ ಮೇಲೆ ನಂಬಿಕೆ ಯಿಲ್ಲದಿದ್ದರೆ ಬಿಟ್ಟುಬಿಡಿ, ಮೂಢನಂಬಿಕೆ ಹೆಸರಿನಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News