ಚುನಾವಣೆ ನೀತಿಸಂಹಿತೆ ಉಲ್ಲಂಘನೆ: ಚುನಾವಣಾ ಆಯೋಗ, ಜಿಎಸ್‌ಟಿ ಮಂಡಳಿ ಮುಖ್ಯಸ್ಥರ ವಿರುದ್ಧ ದೂರು

Update: 2017-11-11 15:57 GMT

ಅಹ್ಮದಾಬಾದ್, ನ.11: ಜಿಎಸ್‌ಟಿಯಡಿ ತೆರಿಗೆಯನ್ನು ಇಳಿಸಿರುವ ಸರಕಾರದ ಕ್ರಮವು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗ ಮತ್ತು ಜಿಎಸ್‌ಟಿ ಮಂಡಳಿ ಮುಖ್ಯಸ್ಥರ ವಿರುದ್ಧ ಗುಜರಾತ್ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಗಿದೆ.

ಈ ದಾವೆಯನ್ನು ಹೂಡಿರುವ ಕೇಬಲ್ ಆಪರೇಟರ್ ಆಗಿರುವ ಸಂದೀಪ್ ಶರ್ಮಾ, ಗುಜರಾತ್ ಚುನಾವಣೆಗೆ ಮುನ್ನ ನಡೆದ ಜಿಎಸ್‌ಟಿ ಮಂಡಳಿಯ ಸಭೆ ರಾಜಕೀಯ ಉದ್ದೇಶದಿಂದ ಕೂಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಜಾರಿಯಲ್ಲಿರುವ ಚುನಾವಣಾ ನೀತಿಸಂಹಿತೆಯನ್ನು ಪರಿಗಣಿಸಿದರೆ ತೆರಿಗೆಗಳಲ್ಲಿ ಇಳಿಕೆಯನ್ನು ಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಆರ್ಥಿಕ ಹಿಂಜರಿತದ ಮಧ್ಯೆ ಸಾರ್ವಜನಿಕ ವೆಚ್ಚವನ್ನು ಸರಿದೂಗಿಸುವ ಸಲುವಾಗಿ ಸರಕಾರ ಶುಕ್ರವಾರ ಗುವಾಹಟಿಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 23ನೇ ಸಭೆಯಲ್ಲಿ 200 ವಸ್ತುಗಳ ತೆರಿಗೆಯನ್ನು ಇಳಿಸಿತ್ತು. ಸುಮಾರು 178 ದಿನಬಳಕೆಯ ವಸ್ತುಗಳ ಮೇಲಿನ ತೆರಿಗೆಯನ್ನು ಶೇಕಡಾ 28ರಿಂದ ಶೇಕಡಾ 18ಕ್ಕೆ ಇಳಿಸಲಾಗಿತ್ತು.

ಸರಕಾರ ಇತ್ತೀಚೆಗೆ ಸಮೀಕ್ಷೆ ನಡೆಸಿದಾಗ ಮತ್ತು ಮಾಧ್ಯಮ ವರದಿಗಳಲ್ಲಿ ಗುಜರಾತ್‌ನ ಜನರ ಬೆಂಬಲ ಈ ಬಾರಿ ಆಡಳಿತಾರೂಡ ಪಕ್ಷದ ಪರವಾಗಿಲ್ಲ ಎಂದು ತಿಳಿದುಬಂದಿತ್ತು. ಜಿಎಸ್‌ಟಿಯ ಅನುಷ್ಠಾನದಿಂದ ಜನರು ಅಸಮಾಧಾನ ಹೊಂದಿದ್ದರು. ಹಾಗಾಗಿ ದುರುದ್ದೇಶದಿಂದ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿ ಸರಕಾರ ನವೆಂಬರ್ 10ರಂದು ಜಿಎಸ್‌ಟಿ ಸಭೆಯನ್ನು ಕರೆಯಿತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಜಿಎಸ್‌ಟಿಯಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಮಂಡಳಿಯ ನಿರ್ಧಾರವು ಮತದಾರರ ಮನಸಿನ ಮೇಲೆ ಪ್ರಭಾವ ಬೀರಲಿದ್ದು ಡಿಸೆಂಬರ್ 9 ಮತ್ತು 14ರಂದು ಚುನಾವಣೆ ನಡೆಯಲಿರುವ ಚುನಾವಣೆಯ ಮೇಲೆ ಪರಿಣಾಮವಾಗಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಂದಿನ ವಾರ ಈ ದೂರಿನ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ. ಗುಜರಾತ್‌ನ ಸುಮಾರು 1.5 ಕೋಟಿ ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಿಎಸ್‌ಟಿ ಮಂಡಳಿಯ ನಿರ್ಧಾರದಿಂದ ಲಾಭ ಪಡೆಯಲಿದ್ದಾರೆ. ಇದು ರಾಜ್ಯದ ರಾಜಕೀಯ ಪರಿಸ್ಥಿತಿಯ ಮೇಲೆ ಮತ್ತು ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂದು ದೂರುದಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News