ಜಗತ್ತಿನಲ್ಲಿ ಮಾನವೀಯತೆ ಇನ್ನೂ ಬದುಕಿದೆಯೆಂದು ಗೊತ್ತಾಗಿದ್ದೇ ಆ ಪುಟ್ಟ ದೇವತೆಯಿಂದ...

Update: 2017-11-12 11:39 GMT

ಶೋಹ್ರಾಬ್ ಕಡುಬಡತನದಲ್ಲಿ ಬದುಕುತ್ತಿರುವ ವ್ಯಕ್ತಿ. ಹೊಟ್ಟೆಪಾಡಿಗಾಗಿ ಮಲಗುಂಡಿಗಳನ್ನು, ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ವೃತ್ತಿ ಆತನದು. ತನ್ನ ಬದುಕು ತನಗೇ ಅಸಹ್ಯ ಹುಟ್ಟಿಸುತ್ತಿದ್ದರೂ ತನ್ನನ್ನು ನಂಬಿದವರ ತುತ್ತಿನ ಚೀಲಗಳನ್ನು ತುಂಬಿಸಲು ಈ ವೃತ್ತಿ ಆತನಿಗೆ ಅನಿವಾರ್ಯವಾಗಿದೆ. ಈ ಜಗತ್ತಿನಲ್ಲಿ ಮಾನವೀಯತೆ ಎಂದೋ ಸತ್ತುಹೋಗಿದೆ ಎಂದುಕೊಂಡಿದ್ದ ಶೋಹ್ರಾಬ್‌ನ ಆ ಗಟ್ಟಿನಂಬಿಕೆಯನ್ನು ಬದಲಿಸಿದ್ದು ಓರ್ವ ಪುಟ್ಟ ಬಾಲಕಿ. ಶೋಹ್ರಾಬ್ ಹೇಳುವುದನ್ನು ಆತನ ಮಾತುಗಳಲ್ಲೇ ಕೇಳಿ....

ನಮ್ಮಂಥವರ ಬಗ್ಗೆ ಪ್ರೀತಿ ಅಥವಾ ಕಾಳಜಿಯನ್ನು ನಾನೆಂದಿಗೂ ಯಾರದೇ ಕಣ್ಣುಗಳಲ್ಲಿ ಕಂಡಿರಲಿಲ್ಲ. ನಾನು ಕೆಲಸದಲ್ಲಿ ತೊಡಗಿಕೊಂಡಿರುವಾಗ ಜನರು ನಾನು ನೇರ ನರಕದಿಂದ ಬಂದವನೇನೋ ಎಂಬ ಭಾವನೆಯನ್ನು ನನ್ನಲ್ಲಿ ಮೂಡಿಸುತ್ತಾರೆ. ನಾವು ಒಂದು ಕಪ್ ಚಹಾ ಕುಡಿಯಲೂ ಎಲ್ಲಿಯೂ ಕುಳಿತುಕೊಳ್ಳುವಂತಿಲ್ಲ. ಜನರು ಹೊಲಸನ್ನು ನೋಡುವಂತೆ ನಮ್ಮನ್ನು ನೊಡುತ್ತಾರೆ. ಯಾವುದೇ ಕಾರಣವಿಲ್ಲದೆ ಅಪರಿಚಿತ ವ್ಯಕ್ತಿಗಳಿಂದ ಅವಮಾನಕ್ಕೊಳಗಾದ ನಂತರ ನಾನು ನನ್ನ ಕಣ್ಣೀರನ್ನು ಮರೆಮಾಡಿಕೊಂಡಿದ್ದ ದಿನಗಳೂ ಇವೆ. ಬಡವರಿಗೆ ಈ ಜಗತ್ತಿನಲ್ಲಿ ಯಾವದೇ ಪ್ರೀತಿ ಉಳಿದುಕೊಂಡಿಲ್ಲ ಎನ್ನುವುದು ನನಗೆ ಖಚಿತವಾಗಿತ್ತು.

ಹತ್ತು ವರ್ಷಗಳ ಹಿಂದೆ ನಾನು ಶಾಲೆಯೊಂದರ ಬಳಿ ಕೆಲಸ ಮಾಡುತ್ತಿದ್ದೆ. ಕಟ್ಟಿಕೊಂಡಿದ್ದ ಒಳಚರಂಡಿಯನ್ನು ಸ್ವಚ್ಛಗೊಳಿಸಿ ಅದನ್ನು ಸರಿಪಡಿಸಬೇಕಿತ್ತು. ನಾವು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯನ್ನು ನಿರ್ಮಿಸಿದ್ದೆವು ಮತ್ತು ಕಾಮಗಾರಿ ಕೆಲವು ದಿನಗಳ ಕಾಲ ನಡೆಯಲಿತ್ತು. ಹೀಗಾಗಿ ವಾಹನಗಳಲ್ಲಿ ಶಾಲೆಗೆ ಬರುವ ಮಕ್ಕಳು ಇಳಿದು ನಡೆದುಕೊಂಡೇ ಹೋಗಬೇಕಾಗಿತ್ತು. ನನ್ನ ಕೆಲಸವನ್ನು ಮತ್ತೆ ಅವಮಾನಿಸಬಹುದಾದ ಯಾರತ್ತಲೂ ಗಮನ ಕೊಡದೆ ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಿದ್ದೆ.

ಅದೊಂದು ದಿನ ಪುಟ್ಟ ಹುಡುಗಿಯೋರ್ವಳು ಬಾಯಿ ತುಂಬ ನಗುವನ್ನು ತುಂಬಿಕೊಂಡು ನನ್ನ ಬಳಿ ಬಂದಿದ್ದಳು. ‘ನೀನು ಇಷ್ಟೇಕೆ ಕೊಳಕಾಗಿದ್ದೀಯಾ’ ಎಂದು ಆ ಪುಟ್ಟ ದೇವತೆ ನನ್ನನ್ನು ಪ್ರಶ್ನಿಸಿದ್ದಳಳು. ನಾನು ಏನನ್ನಾದರೂ ಹೇಳುವ ಮುನ್ನವೇ ಆಕೆಯ ತಂದೆ, ನೀನು ಹೀಗೆಲ್ಲ ಅಪರಿಚಿತರೊಂದಿಗೆ ಮಾತನಾಡಬಾರದು ಎಂದು ಬೈಯ್ದು ಮಗಳನ್ನು ಎಳೆದೊಯ್ದಿದ್ದ. ನನಗೆ ತುಂಬ ಕಳವಳವಾಗಿತ್ತು, ನಮ್ಮಂತಹವರು ಎಷ್ಟೊಂದು ಅಸಹ್ಯ ಹುಟ್ಟಿಸುವಂತಹ ಕೆಲಸಗಾರರು ಎಂದು ಆತ ತನ್ನ ಮಗಳಿಗೆ ಹೇಳುತ್ತಿರಬಹುದೆಂದು ನಾನು ಊಹಿಸಿ ನಾನು ಕುಗ್ಗಿ ಹೋಗಿದ್ದೆ.

 ನಂತರ ಒಂದು ವಾರ ಕಾಲ ಆ ಹುಡುಗಿ ಪ್ರತಿದಿನ ನನ್ನ ಬಳಿ ಬಂದು ‘ನೀನು ಇಷ್ಟೇಕೆ ಕೊಳಕಾಗಿದ್ದೀಯಾ’ ಎಂಬ ಅದೇ ಪ್ರಶ್ನೆಯನ್ನು ಕೇಳುತ್ತಿದ್ದಳು. ಆಕೆಯ ತಂದೆ ಬಂದು ಮಗಳನ್ನು ಎಳೆದೊಯ್ಯುತ್ತಿದ್ದರಿಂದ ನನಗೆ ಮಾತನಾಡಲು ಅವಕಾಶವೇ ಸಿಗುತ್ತಿರಲಿಲ್ಲ. ನಾನೇಕೆ ಕೊಳಕಾಗಿದ್ದೇನೆಂದು ತಿಳಿಸಲು ಸುಂದರ ಉತ್ತರಕ್ಕಾಗಿ ಯೋಚಿಸುತ್ತ ನನಗೆ ಆ ರಾತ್ರಿಗಳಲ್ಲಿ ನಿದ್ರೆಯೇ ಬರುತ್ತಿರಲಿಲ್ಲ.

ಬಡವರು ಎಲ್ಲ ಹೊತ್ತಿನಲ್ಲಿಯೂ ಸ್ವಚ್ಛರಾಗಿರಲು ಸಾಧ್ಯವಿಲ್ಲ. ನಾವು ಹುಟ್ಟಿದ್ದು ಕೊಳಚೆಯಲ್ಲಿ, ಬೆಳೆದಿದ್ದು ಕೊಳಚೆಯಲ್ಲಿ ಮತ್ತು ಸಾಯುವುದೂ ಕೊಳಚೆಯಲ್ಲಿಯೇ. ಕೊಳಕು ವಸ್ತುವೊಂದು ಈ ಜಗತ್ತಿನಿಂದ ತೊಲಗಿದರೆ ಯಾರೂ ಬೇಸರ ಮಾಡಿಕೊಳ್ಳು ವುದಿಲ್ಲ. ಈ ಯಾವುದನ್ನೂ ನಾನು ಆ ಪುಟ್ಟ ಬಾಲೆಗೆ ಹೇಳಲು ಸಾಧ್ಯವಾಗಿರಲಿಲ್ಲ. ಆದಷ್ಟು ಬೇಗನೆ ಕೆಲಸವನ್ನು ಮುಗಿಸಬೇಕು ಎಂದು ನಾನು ಬಯಸಿದ್ದೆ, ಇನ್ನೆಂದೂ ಆ ಹುಡುಗಿಯನ್ನು ನೋಡಬಾರದು ಎಂದು ಬಯಸಿದ್ದೆ.

 ನಮ್ಮ ಕೆಲಸ ಮುಗಿಯುವ ದಿನ ಕೊನೆಗೂ ಬಂದಿತ್ತು. ಅದು ರಮಝಾನ್‌ನ ಮಧ್ಯಾಹ್ನವಾಗಿತ್ತು. ನಾನೂ ತೀರ ದಣಿದಿದ್ದೆ, ನನ್ನ ಶಕ್ತಿ ಸಂಪೂರ್ಣ ಉಡುಗಿತ್ತು. ಶಾಲೆಯು ಅಂದು ಮುಚ್ಚಿತ್ತು, ಹೀಗಾಗಿ ಆ ಪುಟ್ಟ ಬಾಲಕಿ ಬಂದಿರಲಿಲ್ಲ. ನನಗೆ ನೆಮ್ಮದಿಯ ಭಾವನೆ ಮೂಡಿತ್ತು. ನನ್ನ ಸರಂಜಾಮುಗಳನ್ನು ಒಟ್ಟುಗೂಡಿಸಿ ಇನ್ನೇನು ಅಲ್ಲಿಂದ ಹೊರಡಲಿದ್ದೆ......ಆಗ ಏಕಾಏಕಿ ಆ ಹುಡುಗಿ ಮತ್ತೆ ಕಾಣಿಸಿಕೊಂಡಳು. ಆಕೆ ನನ್ನತ್ತ ಓಡುತ್ತ ಬರುತ್ತಿದ್ದಳು. ಆಕೆ ನನ್ನ ಬಳಿಗೆ ತಲುಪಿದಾಗ ಏದುಸಿರು ಬಿಡುತ್ತಿದ್ದಳು. ‘ನೀನು ಇಷ್ಟೇಕೆ ಕೊಳಕಾಗಿದ್ದೀಯಾ’ ಎಂಬ ಅದೇ ಪ್ರಶ್ನೆಯನ್ನು ಆಲಿಸಲು ನಾನು ಕಾಯುತ್ತಿದ್ದೆ. ಆದರೆ ಆಕೆ ಮುಗುಳ್ನಗುತ್ತಿದ್ದಳೇ ಹೊರತು ಯಾವುದೇ ಪ್ರಶ್ನೆಯನ್ನು ಕೇಳಲಿಲ್ಲ. ನಿನ್ನ ತಂದೆ ಎಲ್ಲಿ ಎಂದು ನಾನು ಪ್ರಶ್ನಿಸಿದಾಗ ದೂರದಲ್ಲಿ ನಿಂತಿದ್ದ ಕಾರಿನ ಕಡೆಗೆ ಕೈ ಮಾಡಿದ್ದಳು. ನಾನು ಮತ್ತೆ ಅದೇ ಪ್ರಶ್ನೆಗಾಗಿ ಕಾಯುತ್ತಿದ್ದೆ. ಆಗಲೇ ಆಕೆ ‘ಅಂಕಲ್, ನಿನಗೆ ಕೆಂಪು ಬಣ್ಣ ಇಷ್ಟವಾ’ ಎಂದು ಪ್ರಶ್ನಿಸಿದ್ದಳು. ನಾನೇನಾದರೂ ಹೇಳುವ ಮುನ್ನವೇ ಹಿಂದುಗಡೆಯಿದ್ದ ತನ್ನ ಕೈಗಳನ್ನು ಮುಂದಕ್ಕೆ ತಂದು ನನ್ನ ಕೈಯಲ್ಲೊಂದು ಪ್ಯಾಕೆಟ್ ಇಟ್ಟಿದ್ದಳು. ಆಕೆಯ ತಂದೆ ಕಾರಿನ ಹಾರ್ನ್ ಬಾರಿಸಿದಾಗ ಹುಡುಗಿ,‘ಒಳಚರಂಡಿಯನ್ನು ನಾನು ಸ್ವಚ್ಛ ಮಾಡಲಾಗುವುದಿಲ್ಲ, ಆದರೆ ನೀನು ಸ್ವಚ್ಛವಾಗಿರಲು ನೆರವಾಗಬಲ್ಲೆ. ಈ ಶರ್ಟ್ ನಿನಗಾಗಿ,ಅಂಕಲ್’ ಎಂದು ಹೇಳಿದಳು. ನನ್ನ ಬಾಯಿಯಿಂದ ಶಬ್ದಗಳೇ ಹೊರಡಲಿಲ್ಲ. ಆಕೆಯ ತಂದೇ ಪದೇಪದೇ ಹಾರ್ನ್ ಬಾರಿಸಿದಾಗ ಹುಡುಗಿ ಕಾರಿನತ್ತ ಓಡಿದ್ದಳು.....ನನ್ನನ್ನು ಕಣ್ಣೀರಿನೊಂದಿಗೆ ಬಿಟ್ಟು...

ಈ ಜಗತ್ತಿನಲ್ಲಿ ಮಾನವೀಯತೆ ಎಂದೋ ಸತ್ತು ಹೋಗಿದೆ ಎಂಬ ನನ್ನ ನಂಬಿಕೆಯನ್ನೇ ಆ ಪುಟ್ಟ ದೇವತೆ ಹುಸಿಯಾಗಿಸಿದ್ದಳು. ಮಾನವೀಯತೆ ಇನ್ನೂ ಬದುಕಿದೆ ಎನ್ನುವುದನ್ನು ಸಾಬೀತು ಮಾಡಿದ್ದಳು. ಅವಳೀಗ ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆ ಎನ್ನುವುದು ನನಗೆ ಗೊತ್ತಿಲ್ಲ. ಆ ಪುಟ್ಟ ದೇವತೆ ಎಲ್ಲೇ ಇರಲಿ, ಆಕೆಯ ಜೀವನದಲ್ಲಿ ಯಾವುದೇ ಕಲ್ಮಶಗಳಿಲ್ಲದೆ ಮಾಡು ತಂದೆ ಎಂದು ನಾನು ದೇವರನ್ನು ಪ್ರತಿದಿನ ಪ್ರಾರ್ಥಿಸುತ್ತಿದ್ದೇನೆ.

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News