×
Ad

ತೆಲಂಗಾಣ: ದಲಿತ ಯುವಕರ ಮೇಲೆ ದೌರ್ಜನ್ಯ ನಡೆಸಿದ ರಾಜಕಾರಣಿ

Update: 2017-11-12 21:34 IST

ಹೈದರಾಬಾದ್, ನ.12: ಸ್ಥಳೀಯ ರಾಜಕಾರಣಿಯೊಬ್ಬ ಇಬ್ಬರು ದಲಿತ ಯುವಕರಿಗೆ ಹಲ್ಲೆ ನಡೆಸಿದ ಘಟನೆ ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯಲ್ಲಿ ನಡೆದಿರುವುದಾಗಿ thenewsminute.com ವರದಿ ಮಾಡಿದೆ. ಈತ ಬಿಜೆಪಿ ನಾಯಕ ಎನ್ನಲಾಗುತ್ತಿದ್ದರೂ ರಾಜ್ಯ ಬಿಜೆಪಿ ವಕ್ತಾರರು ಇದನ್ನು ನಿರಾಕರಿಸಿದ್ದಾರೆ.

ಈ ಘಟನೆಯ ವಿಡಿಯೋ ವೈರಲ್ ಆಗುತ್ತಲೇ ತೆಲಂಗಾಣದಾದ್ಯಂತ ದಲಿತ ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಪ್ಟಂಬರ್ ನಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಯುವಕರನ್ನು ಗುಂಡಿಯೊಂದರ ನೀರಿನಲ್ಲಿ ಮುಳುಗಲು ಭರತ್ ರೆಡ್ಡಿ ಬಲವಂತಪಡಿಸುತ್ತಿರುವುದು ಹಾಗು ಕೋಲಿನಿಂದ ಹಲ್ಲೆ ನಡೆಸುವುದಾಗಿ ಬೆದರಿಕೆ ಒಡ್ಡುತ್ತಿರುವುದು ವಿಡಿಯೋದಲ್ಲಿದೆ.

ದಲಿತ ಯುವಕರು ಜಲ್ಲಿ ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಭರತ್ ರೆಡ್ಡಿ ಈ ಕೃತ್ಯ ಎಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಮ್ಮನ್ನು ಕ್ಷಮಿಸುವಂತೆ ಯುವಕರು ಅಂಗಲಾಚಿದರು ಹಾಗು ಕಾಲಿಗೂ ಬಿದ್ದಿದ್ದಾರೆ. ಆದರೆ ಭರತ್ ರೆಡ್ಡಿ ಇದಕ್ಕೆ ಕಿವಿಗೊಡದೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಕೈ ಮುಗಿದುಕೊಂಡು ಅವರು ನೀರಿನಲ್ಲಿ ಮುಳುಗುತ್ತಿದ್ದರೆ, ರೆಡ್ಡಿ ಮೇಲೆ ನಿಂತು ನೋಡುತ್ತಿದ್ದ ಎನ್ನಲಾಗಿದೆ.

ಲಕ್ಷ್ಮಣ್ ಹಾಗು ಹಗ್ಗಾದಾ ಎಂಬ ಈ ಯುವಕರು ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿಯೆತ್ತಿದ್ದರು ಎಂದು ಸ್ಥಳಿಯರು ಹೇಳುತ್ತಾರೆ. ಈ ಬಗ್ಗೆ ದೂರು ಲಭಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಎಸಿಪಿ ಎಂ. ಸುಧಾಕರ್ ತಿಳಿಸಿದ್ದಾರೆ.

ಆದರೆ ಈತ ಬಿಜೆಪಿ ನಾಯಕ ಎನ್ನುವುದನ್ನು ರಾಜ್ಯ ಬಿಜೆಪಿ ವಕ್ತಾರ ಕೃಷ್ಣ ಸಾಗರ್ ನಿರಾಕರಿಸಿದ್ದಾರೆ. “ಮಿಸ್ ಕಾಲ್ ಮೂಲಕ ಆತ ಪಕ್ಷದ ಕಾರ್ಯಕರ್ತನಾಗಿದ್ದಾನೆಯೇ ಹೊರತು ನಾಯಕನಲ್ಲ” ಎಂದವರು  ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News