ಮಂಗಳನ ಅಂಗಳಕ್ಕೆ ಪ್ರಯಾಣ: 1.3 ಲಕ್ಷ ಭಾರತೀಯರಿಂದ ಹೆಸರು ನೋಂದಣಿ
ಹೊಸದಿಲ್ಲಿ, ನ.12: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಂಗಳನಲ್ಲಿಗೆ ಹೆಸರು ಕಳುಹಿಸಿ ಯೋಜನೆಯಡಿ 1.3 ಲಕ್ಷಕ್ಕೂ ಅಧಿಕ ಭಾರತೀಯರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಮಂಗಳ ಗ್ರಹಕ್ಕೆ ತೆರಳಲು ಹಮ್ಮಿಕೊಂಡಿರುವ ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೊರೇಶನ್ ಯೂಸಿಂಗ್ ಸೀಸ್ಮಿಕ್ ಇನ್ವೆಸ್ಟಿಗೇಶನ್ಸ್, ಜಿಯೋಡಿಸಿ ಆ್ಯಂಡ್ ಹೀಟ್ ಟ್ರಾನ್ಸ್‌ಪೋರ್ಟ್) ಯೋಜನೆಯಲ್ಲಿ ಸಾರ್ವಜನಿಕರು ತಮ್ಮ ಹೆಸರುಗಳನ್ನು ನೋಂದಾಯಿಸಲು ಕಳೆದ ತಿಂಗಳು ನಾಸಾ ಆಹ್ವಾನ ನೀಡಿತ್ತು.
ಇದರಲ್ಲಿ ಹೆಸರನ್ನು ನೋಂದಾಯಿಸಿರುವ ಎಲ್ಲರಿಗೂ ಬೋರ್ಡಿಂಗ್ ಪಾಸನ್ನು ನಾಸಾ ನೀಡಿದೆ. ಇವರ ಹೆಸರುಗಳನ್ನು ಸಣ್ಣ ಮೈಕ್ರೊಚಿಪ್‌ವೊಂದರಲ್ಲಿ ಕೆತ್ತಿ ಅದನ್ನು ಉಪಗ್ರಹದ ಜೊತೆ ಕೆಂಪುಗ್ರಹಕ್ಕೆ ಕಳುಹಿಸಲಾಗುವುದು. ಈ ಚಿಪ್ ಮಂಗಳನಲ್ಲಿ ಶಾಶ್ವತವಾಗಿ ಉಳಿಯಲಿರುವುದರಿಂದ ನೋಂದಣಿ ಮಾಡಿದವರ ಹೆಸರು ಕೂಡಾ ಉಳಿಯಲಿದೆ. ಜಗತ್ತಿನಾದ್ಯಂತ 24,29,809 ಮಂದಿ ನಾಸಾದ ಆಹ್ವಾನವನ್ನು ಸ್ವೀಕರಿಸಿದ್ದು ಇವರ ಪೈಕಿ ಅಮೆರಿಕಾದಿಂದ 6,76,773 ಮಂದಿ, ಚೀನಾದಿಂದ 2,62,752 ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. 1,38,899 ಭಾರತೀಯರು ಈ ಯೋಜನೆಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದು ಭಾರತ ಮೂರನೇ ಸ್ಥಾನದಲ್ಲಿದೆ. ನಾಸಾ ಮುಂದಿನ ವರ್ಷ ಮೇ 5ರಂದು ಇನ್ೈಟ್ ಉಪಗ್ರಹವನ್ನು ಉಡಾಯಿಸಲಿದೆ.
ಮಂಗಳ ಗ್ರಹವು ಎಲ್ಲಾ ವಯೋಮಾನದ ಜನರ ಆಸಕ್ತಿಯನ್ನು ಕೆರಳಿಸುವ ಗ್ರಹವಾಗಿದೆ ಎಂದು ಹೇಳಿರುವ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬ್‌ನ ಮುಖ್ಯಸ್ಥ ಬ್ರೂಸ್ ಬನೆರ್ಡ್, ಈ ಯೋಜನೆ ಸಾಮಾನ್ಯ ಜನರಿಗೆ ನಾಸಾದ ಯೋಜನೆಯ ಭಾಗವಾಗುವ ಅವಕಾಶವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
ಮಂಗಳನಲ್ಲಿಗೆ ನಿಮ್ಮ ಹೆಸರನ್ನು ಕಳುಹಿಸುವ ರೀತಿಯ ಅಭಿಯಾನಗಳನ್ನು, ಕೇವಲ ಮಂಗಳ ಗ್ರಹ ಮಾತ್ರವಲ್ಲ ಇತರ ಹಲವು ಯೋಜನೆಗಳಲ್ಲಿ ನಾಸಾ ಮಾಡಿದೆ. ಇದು ಜನರನ್ನು ನಾಸಾದ ಯೋಜನೆ ಜೊತೆ ಸೇರಿಸಿಕೊಳ್ಳುವ ಒಂದು ತಮಾಷೆಗಾಗಿ ಮಾಡುವ ಅಭಿಯಾನವಾಗಿದೆ ಎಂದು ನಾಸಾದ ಆ್ಯಂಡ್ರೂ ಗುಡ್ ಹೇಳುತ್ತಾರೆ.
ಹೆಸರು ನೋಂದಾಯಿಸಿದ ವ್ಯಕ್ತಿಗಳು ತಮ್ಮ ಬೋರ್ಡಿಂಗ್ ಪಾಸ್‌ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಅದರಲ್ಲಿ ಅವರು ಈವರೆಗೆ ನಾಸಾದ ವಿವಿಧ ಬಾಹ್ಯಾಕಾಶ ಅಭಿಯಾನಗಳ ಮೂಲಕ ಸಾಗಿರುವ ದೂರದ ಲೆಕ್ಕವನ್ನೂ ನೀಡಲಾಗಿದೆ.
ನವೆಂಬರ್ 26ರಂದು ಮಂಗಳನ ಮೇಲೆ ಇಳಿಯಲಿರುವ ಇನ್‌ಸೈಟ್ ಕೆಂಪು ಗ್ರಹದ ಮೇಲೆ ಉಂಟಾಗುವ ಕಂಪನಗಳ ಆಧಾರದಲ್ಲಿ ಗ್ರಹದ ಒಳರಚನೆಯ ಅಧ್ಯಯನ ಮಾಡಲಿದೆ. ಮಂಗಳನಲ್ಲಿನ ಕಂಪನಗಳನ್ನು ಅಭ್ಯಸಿಸುವ ಮೂಲಕ ಸೌರಮಂಡಲದಲ್ಲಿ ಮಂಗಳನಂತಹ ಗ್ರಹಗಳು ಹೇಗೆ ರಚನೆಯಾಗಿವೆ ಎಂಬ ಬಗ್ಗೆಯೂ ಇನ್‌ಸೈಟ್ ಅಧ್ಯಯನ ಮಾಡಲಿದೆ.