ರಣಜಿ ಟ್ರೋಫಿ : ಕರ್ನಾಟಕ -ದಿಲ್ಲಿ ಪಂದ್ಯ ಡ್ರಾ

Update: 2017-11-12 17:08 GMT

 ಬೆಂಗಳೂರು, ನ.12: ಕರ್ನಾಟಕ ಮತ್ತು ದಿಲ್ಲಿ ತಂಡಗಳ ನಡುವಿನ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯ ರವಿವಾರ ಡ್ರಾದಲ್ಲಿ ಕೊನೆಗೊಂಡಿದೆ.

 ಆಲೂರಿನ ಕೆಎಸ್‌ಸಿಎ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಪಂದ್ಯ ಡ್ರಾಗೊಂಡಿದ್ದರೂ, ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕಗಳನ್ನು ಕರ್ನಾಟಕ ತನ್ನ ಖಾತೆಗೆ ಸೇರಿಸಿಕೊಂಡಿದೆ. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 649 ರನ್ ಗಳಿಸಿತ್ತು. ಆದರೆ ದಿಲ್ಲಿ 301 ರನ್‌ಗಳಿಗೆ ಆಲೌಟಾಗಿತ್ತು. ಇದರೊಂದಿಗೆ ಕರ್ನಾಟಕ 348 ರನ್‌ಗಳ ಮುನ್ನಡೆ ಸಾಧಿಸಿತ್ತು. ಕರ್ನಾಟಕ ಒಟ್ಟು 23 ಅಂಕಗಳನ್ನು ಗಳಿಸಿ ’ಎ’ ಗುಂಪಿನಲ್ಲಿ ಅಗ್ರ ಸ್ಥಾನ ಗಿಟ್ಟಿಸಿಕೊಂಡಿದೆ. ದಿಲ್ಲಿ 17 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ.

ಪಂದ್ಯದ ನಾಲ್ಕನೇ ದಿನವಾಗಿರುವ ರವಿವಾರ ದಿನದಾಟದಂತ್ಯಕ್ಕೆ ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ 63 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 235 ರನ್ ಗಳಿಸಿತು.

 ಮೂರನೇ ದಿನದಾಟದಂತ್ಯಕ್ಕೆ ದಿಲ್ಲಿ ತಂಡ 84 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 277 ರನ್ ಗಳಿಸಿತ್ತು. ನಾಯಕ ಗೌತಮ್ ಗಂಭೀರ್ 41ನೇ ಪ್ರಥಮ ದರ್ಜೆ ಶತಕ(135) ದಾಖಲಿಸಿ ಔಟಾಗದೆ ಉಳಿದಿದ್ದರು. ಇಂದು ಅವರು ಬ್ಯಾಟಿಂಗ್ ಮುಂದುವರಿಸಿ 144 ರನ್ ಗಳಿಸಿ ಅಭಿಮನ್ಯು ಮಿಥುನ್‌ಗೆ ವಿಕೆಟ್ ಒಪ್ಪಿಸಿದರು.

ಅಭಿಮನ್ಯು ಮಿಥುನ್(70ಕ್ಕೆ 5) ದಾಳಿಗೆ ಸಿಲುಕಿದ ದಿಲ್ಲಿ ತಂಡ 95 ಓವರ್‌ಗಳಲ್ಲಿ 301 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಇಂದಿನ ಆಟದಲ್ಲಿ ದಿಲ್ಲಿ ಮೂರನೇ ದಿನದಾಟದಂತ್ಯಕ್ಕೆ ಗಳಿಸಿದ್ದ ಮೊತ್ತಕ್ಕೆ 24 ರನ್ ಗಳಿಸುವಷ್ಟರಲ್ಲಿ ಅಂತಿಮ 6 ವಿಕೆಟ್‌ಗಳನ್ನು ಕೈ ಚೆಲ್ಲಿತು.

 ರವಿಕುಮಾರ್ ಸಮರ್ಥ ಜೊತೆ ಎರಡನೆ ಇನಿಂಗ್ಸ್ ಆರಂಭಿಸಿದ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಶತಕ ವಂಚಿತಗೊಂಡರು. ರಾಹುಲ್ ಮತ್ತು ಸಮರ್ಥ್ ಮೊದಲ ವಿಕೆಟ್ ಜೊತೆಯಾಟದಲ್ಲಿ 30.1 ಓವರ್‌ಗಳಲ್ಲಿ 121 ರನ್ ಸೇರಿಸಿದರು.

31ನೆ ಓವರ್‌ನ ಮೊದಲ ಎಸೆತದಲ್ಲಿ ಮನನ್ ಶರ್ಮಾ ಅವರು ಕರ್ನಾಟಕದ ಸಮರ್ಥ್(47) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಸಮರ್ಥ್ ಅವರು 3 ರನ್‌ನಿಂದ ಅರ್ಧಶತಕ ವಂಚಿತಗೊಂಡರು.

ಎರಡನೆ ವಿಕೆಟ್‌ಗೆ ಲೋಕೇಶ್ ರಾಹುಲ್ ಮತ್ತು ಮಾಯಾಂಕ್ ಅಗರವಾಲ್ 40 ರನ್ ಸೇರಿಸಿದರು. ಲೋಕೇಶ್ ರಾಹುಲ್ ಶತಕದ ನಿರೀಕ್ಷೆಯಲ್ಲಿದ್ದರು. ಆದರೆ 92 ರನ್(109ಎ,9ಬೌ,2ಸಿ) ಗಳಿಸಿದ್ದಾಗ ರನೌಟಾಗುವುದರೊಂದಿಗೆ ಪೆವಿಲಿಯನ್ ಸೇರಿದರು.

ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ಮಾಯಾಂಕ್ ಅಗರವಾಲ್ 23 ರನ್ ಗಳಿಸಿ ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ ಔಟಾಗದೆ 33 ರನ್ ಮತ್ತು ಮನೀಷ್ ಪಾಂಡೆ ಔಟಾಗದೆ 34 ರನ್ ಗಳಿಸಿದರು. ದಿಲ್ಲಿ ತಂಡದ ನವ್‌ದೀಪ್ ಸೈನಿ ಮತ್ತು ಮನನ್ ಶರ್ಮಾ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News