ನಾಯಕ ಸಂಜು ಶತಕ; ಲಂಕಾ ವಿರುದ್ಧದ ಅಭ್ಯಾಸ ಪಂದ್ಯ ಡ್ರಾ

Update: 2017-11-12 17:12 GMT

ಕೋಲ್ಕತಾ, ನ.12: ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೊಗಸಾದ ಶತಕ ದಾಖಲಿಸಿದ್ದಾರೆ. ಇದರೊಂದಿಗೆ ಎರಡು ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ಇಲ್ಲಿನ ಜೋಧಪುರ ವಿವಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಶನಿವಾರ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 88 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 411 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಪಂದ್ಯದ ಎರಡನೆ ದಿನವಾಗಿರುವ ರವಿವಾರ ಭಾರತದ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡ 75 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 287 ರನ್ ಗಳಿಸಿತು.

 ಲಂಕಾದ ಬೃಹತ್ ಸವಾಲಿಗೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಮಂಡಳಿ ಅಧ್ಯಕ್ಷರ ತಂಡ ಊಟದ ವಿರಾಮದ ಹೊತ್ತಿಗೆ 31ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಲಹಿರು ತಿರಿಮನ್ನೆ ದಾಳಿಗೆ ಸಿಲುಕಿ ಆರಂಭಿಕ ದಾಂಡಿಗರಾದ ತನ್ಮಯ್ ಅಗರ್‌ವಾಲ್ (16) ಮತ್ತು ಆಕಾಶ್ ಭಂಡಾರಿ(3) ಔಟಾಗಿ ಪೆವಿಲಿಯನ್ ಸೇರಿದ್ದರು. ಮೂರನೇ ವಿಕೆಟ್‌ಗೆ ಜೀವನ್‌ಜ್ಯೋತ್ ಸಿಂಗ್‌ಗೆ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಜೊತೆಯಾದರು. ಇವರು ಮೂರನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿದರು.

ಜೀವನ್‌ಜ್ಯೋತ್ ಸಿಂಗ್(35) ಔಟಾದ ಬಳಿಕ ನಾಲ್ಕನೇ ವಿಕೆಟ್‌ಗೆ ರೋಹನ್‌ಪ್ರೇಮ್ ಅವರು ಸಂಜುಗೆ ಸಾಥ್ ನೀಡಿದರು. ಇವರ ಮೂಲಕ ನಾಲ್ಕನೆ ವಿಕೆಟ್‌ಗೆ 71 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು.ರೋಹನ್ ಪ್ರೇಮ್ 39 ರನ್ ಗಳಿಸಿ ಔಟಾದರು.

  ಐದನೇ ವಿಕೆಟ್‌ಗೆ ಸಂಜು ಮತ್ತು ಭಾವನಕಾ ಸಂದೀಪ್ ಅವರು 85 ರನ್ ಜಮೆ ಮಾಡಿದರು.

ನಮನ್ ಓಜಾ ಗಾಯಗೊಂಡು ಹೊರಗುಳಿದ ಹಿನ್ನೆಲೆಯಲ್ಲಿ ತಂಡದ ನಾಯಕತ್ವ ವಹಿಸಿದ್ದ ಸಂಜು ಸ್ಯಾಮ್ಸನ್ ತನ್ನ ಮೇಲೆ ಆಯ್ಕೆ ಸಮಿತಿ ಇಟ್ಟುಕೊಂಡ ವಿಶ್ವಾಸವನ್ನು ಉಳಿಸಿಕೊಂಡರು. ಅವರು 143 ಎಸೆತಗಳನ್ನು ಎದುರಿಸಿದರು. 19 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 128 ರನ್ ಗಳಿಸಿ ಸಮರವಿಕ್ರಮ ಎಸೆತದಲ್ಲಿ ದಿಕ್ವೆಲಾಗೆ ಕ್ಯಾಚ್ ನೀಡಿದರು.

ಸಂದೀಪ್ ಔಟಾಗದೆ 33 ರನ್ ಮತ್ತು ಜಲಜ್ ಸಕ್ಸೇನಾ ಔಟಾಗದೆ 20 ರನ್ ಗಳಿಸಿದರು.

 ಶ್ರೀಲಂಕಾದ 10 ಬೌಲರ್‌ಗಳು ದಾಳಿ ನಡೆಸಿದ್ದರು. ಲಕ್ಷನ್ ಸಂಡಕನ್ 12 ಓವರ್‌ಗಳ ಬೌಲಿಂಗ್ ನಡೆಸಿದರು. 54 ರನ್ ನೀಡಿದರೂ ಅವರಿಗೆ ವಿಕೆಟ್ ದಕ್ಕಲಿಲ್ಲ. ಲಹಿರು ತಿರಿಮನ್ನೆ 6 ಓವರ್‌ಗಳಲ್ಲಿ 22ಕ್ಕೆ 2 ವಿಕೆಟ್, ದಿಲ್ರುವಾನ್ ಪೆರೆರಾ, ಧನಂಜಯ್ ಡಿ ಸಿಲ್ವ ಮತ್ತು ಸದೀರಾ ಸಮರವಿಕ್ರಮ ತಲಾ 1 ವಿಕೆಟ್ ಪಡೆದರು. ಬದಲಿ ವಿಕೆಟ್ ಕೀಪರ್ ಆಗಿರುವ ಸಮರವಿಕ್ರಮ ಕೂಡಾ ಬೌಲಿಂಗ್ ನಡೆಸಿ 4 ಓವರ್‌ಗಳಲ್ಲಿ 13 ರನ್ ನೀಡಿ 1 ವಿಕೆಟ್ ಪಡೆದಿರುವುದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News