ಟೀಕೆಗಳಿಗೆ ‘ಕೂಲ್’ ಆಗಿ ಉತ್ತರಿಸಿದ ಧೋನಿ

Update: 2017-11-12 17:18 GMT

ದುಬೈ, ನ.12: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ವಿರುದ್ಧ ಮಾಜಿ ಆಟಗಾರರು ಮಾಡಿರುವ ಟೀಕೆಗಳಿಗೆ ‘ಕೂಲ್’ ಆಗಿ ಉತ್ತರಿಸಿದ್ದಾರೆ. ‘‘ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ ಇದೆ’’ ಎಂದು ಹೇಳಿದ್ದಾರೆ.
 ದುಬೈನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಸ್ಥಾಪನೆಗೆ ಪೆಸಿಫಿಕ್ ವೆಂಚರ್ಸ್ ಜೊತೆ ಧೋನಿ ಕೈ ಜೋಡಿಸಿದ್ದಾರೆ. ಜಾಗತಿಕ ಕ್ರಿಕೆಟ್ ಅಕಾಡಮಿಯ ಉದ್ಘಾಟನೆಯ ಬಳಿಕ ಧೋನಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಧೋನಿ ಅವರು ನ್ಯೂಝಿಲೆಂಡ್ ವಿರುದ್ಧದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ನಿಧಾನವಾಗಿ ಆಡಿರುವ ಹಿನ್ನೆಲೆಯಲ್ಲಿ ಅವರ ಆಟದ ಬಗ್ಗೆ ಮಾಜಿ ಆಟಗಾರರಾದ ಅಜಿತ್ ಅಗರ್ಕರ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವರು ಟೀಕಿಸಿದ್ದರು.
ನ್ಯೂಝಿಲೆಂಡ್ ವಿರುದ್ಧ ಧೋನಿ ತಂಡದ ಖಾತೆಗೆ ತಮ್ಮಿಂದ ಸಾಧ್ಯವಿರುವ ಕೊಡುಗೆ ನೀಡಿದ್ದರು. ಆದರೆ ಅವರಿಗೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ತಂಡ 40 ರನ್‌ಗಳ ಸೋಲು ಅನುಭವಿಸಿತ್ತು.

ಮಾಜಿ ಆಟಗಾರರ ಟೀಕೆಯನ್ನು ಧೋನಿ ಗಂಭೀರವಾಗಿ ಪರಿಗಣಿಸಿಲ್ಲ. 2007ರಲ್ಲಿ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಮತ್ತು 2011ರಲ್ಲಿ 50 ಓವರ್‌ಗಳ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವಿಶ್ವಚಾಂಪಿಯನ್ ಕಿರೀಟವನ್ನು ಮುಡಿಗೇರಿಸುವಲ್ಲಿ ನಾಯಕನಾಗಿ ಪ್ರಮುಖ ಪಾತ್ರ ವಹಿಸಿದ್ದ ಧೋನಿ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾಜಿ ಆಟಗಾರರು ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ‘‘ಪ್ರತಿಯೊಬ್ಬರಿಗೂ ಬದುಕಿನ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳಿವೆೆ. ನಾವು ಅದನ್ನು ಗೌರವಿಸಬೇಕು ’’ ಎಂದು ಮಾಜಿ ಆಟಗಾರರ ಟೀಕೆಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಧೋನಿ ಉತ್ತರಿಸಿದ್ದಾರೆ.
36ರ ಹರೆಯದ ಧೋನಿ ಭಾರತದ ಕ್ರಿಕೆಟ್ ತಂಡದ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಕನಸು ಕಾಣುತ್ತಿದ್ದಾರೆ.

2014-15ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. 2016ರಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ನಾಯಕ ವಿರಾಟ್ ಕೊಹ್ಲಿಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಅವರಿಗೆ ತೆರೆಯ ಮರೆಯಲ್ಲಿ ನಿಂತು ನಾಯಕತ್ವದ ಪಾಠ ಹೇಳಿಕೊಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News