ಕುಂದಾಪುರ: ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಹಾಲಾಡಿ ಪರ-ವಿರೋಧ ಘೋಷಣೆ

Update: 2017-11-13 09:00 GMT

ಹಾಲಾಡಿ ಮುಂದಿನ ಶಾಸಕ ಎಂದು ಒಪ್ಪದವರು ಪಕ್ಷ ಬಿಟ್ಟು ಹೋಗಬಹುದು ಎಂದ ಯಡಿಯೂರಪ್ಪ

ಕುಂದಾಪುರ, ನ.13: ಕುಂದಾಪುರದ ನೆಹರೂ ಮೈದಾನದಲ್ಲಿ ಇಂದು ನಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪರಿವರ್ತನಾ ರ್ಯಾಲಿಯಲ್ಲಿ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ಕುರಿತು ಪರ ಹಾಗೂ ವಿರೋಧ ವ್ಯಕ್ತವಾಗಿ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಹೊಡೆದಾಟಕ್ಕೆ ಮುಂದಾದ ಎರಡು ಬಣಗಳ ಕಾರ್ಯಕರ್ತರನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿಜೆಪಿ ಮೂಲ ಬಣದ ಕಾರ್ಯಕರ್ತರು ಪರ ಹಾಗೂ ವಿರೋಧ ಘೋಷಣೆಗಳನ್ನು ಕೂಗಿದರು. ವಿರೋಧಿ ಬಣದವರು ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಅಲ್ಲ ಎಂಬ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಿದರು. ಸಭೆಯ ಕೆಳಗೆ ಕುರ್ಚಿಯಲ್ಲಿ ಕುಳಿತಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯನ್ನು ವೇದಿಕೆಗೆ ಕರೆಯುವಂತೆ ಅವರ ಬಣ ಒತ್ತಾ ಯಿಸಿತು. ಇದರ ವಿರುದ್ಧ ಕೆಲ ಕಾರ್ಯಕರ್ತರು ಬಹಿರಂಗ ಆಕ್ರೋಶ ವ್ಯಕ್ತಪಡಿಸಿದರು.

ಆಕ್ರೋಶಗೊಂಡ ಯಡಿಯೂರಪ್ಪ: ಮುಖಂಡರು ವೇದಿಕೆ ಏರುತ್ತಿದ್ದಂತೆ ಹಾಲಾಡಿ ಬಣ ಮತ್ತು ಮೂಲ ಬಿಜೆಪಿ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ವೇದಿಕೆಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಮಧ್ಯ ಪ್ರವೇಶಿಸಿ ಹಾಲಾಡಿ ವಿರೋಧಿಗಳ ವಿರುದ್ಧ  ಕಿಡಿಕಾರಿದರು. ಹಾಲಾಡಿ ನಮ್ಮ ನಾಯಕ ಮತ್ತು ಮುಂದಿನ ಶಾಸಕ. ಅವರನ್ನು ಒಪ್ಪದವರು ಪಕ್ಷ ಬಿಟ್ಟು ಹೋಗಬಹುದು ಎಂದು ಅವರು ಆಕ್ರೋಶಗೊಂಡರು.

ಹೀಗೆ ಸಮಾವೇಶದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ಕಾರ್ಯಕರ್ತರ ಬಳಿ ತೆರಳಿ ಎಚ್ಚರಿಕೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಮಾವೇಶವು ಮುಂದುವರೆಯಿತು.

ಸಭೆ ಮುಗಿದು ಮುಖಂಡರೆಲ್ಲ ಹೋದ ಬಳಿಕ ಹಾಲಾಡಿ ಬಣ ಮತ್ತು ಬಿಜೆಪಿ ಬಣದ ಕಾರ್ಯಕರ್ತರ ಮಧ್ಯೆ ಮತ್ತೆ ಜಟಾಪಟಿ ನಡೆಯಿತು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕಾರ್ಯಕರ್ತರು ಪರಸ್ಪರ ಹೊಡೆದಾಟಕ್ಕೆ ಮುಂದಾದರು ಎನ್ನಲಾಗಿದ್ದು, ಈ ಸಂದರ್ಭ ಮಧ್ಯ ಪ್ರವೇಶಿಸಿದ ಪೊಲೀಸರು ಕಾರ್ಯಕರ್ತರ ಮಧ್ಯೆ ಲಾಠಿ ಬಿಸಿ ಗುಂಪನ್ನು ಚದುರಿಸಿದರು. ಇದೀಗ ಪರಿಸ್ಥಿತಿ ತಿಳಿಗೊಂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎಸ್ಪಿ ಸ್ಪಷ್ಟನೆ: ‘ಪರಿವರ್ತನಾ ಸಮಾವೇಶ ಮುಗಿದು ಯಡಿಯೂರಪ್ಪ ಹಾಗೂ ಮುಖಂಡರು ನಿಗರ್ಮಿಸಿದ ಬಳಿಕವೂ ಹಾಲಾಡಿ ಪರ ಹಾಗೂ ವಿರೋಧ ಘೋಷಣೆಗಳನ್ನು ಕೂಗುತ್ತಿದ್ದ ಕಾರ್ಯಕರ್ತರನ್ನು ಚದುರಿಸಲು ಲಾಠಿ ಬೀಸಿದ್ದೇವೆ ಹೊರತು ಲಾಠಿ ಚಾರ್ಚ್ ಮಾಡಿಲ್ಲ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News