ನ.14 ರಿಂದ ಚೀನಾ ಓಪನ್

Update: 2017-11-13 18:17 GMT

ಫುಝೌ, ನ.13: ಇತ್ತೀಚೆಗೆ ನಾಗ್ಪುರದಲ್ಲಿ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ಸೈನಾ ನೆಹ್ವಾಲ್ ಹಾಗೂ ಎಚ್.ಎಸ್. ಪ್ರಣಯ್ ಮಂಗಳವಾರ ಇಲ್ಲಿ ಆರಂಭಗೊಳ್ಳಲಿರುವ ಚೀನಾ ಓಪನ್ ಸೂಪರ್ ಸರಣಿಯಲ್ಲಿ ಭಾಗವಹಿಸಲಿದ್ದು, ದುಬೈ ಓಪನ್ ಸೂಪರ್ ಸರಣಿ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಈ ಟೂರ್ನಿಯು ಇಬ್ಬರಿಗೂ ಅತ್ಯಂತ ಮುಖ್ಯವಾಗಿದೆ.

ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ಕಳೆದ ವಾರ ನಡೆದ ನ್ಯಾಶನಲ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರನ್ನು ಸೋಲಿಸಿ ಮೂರನೆ ಬಾರಿ ಚಾಂಪಿಯನ್‌ಶಿಪ್ ಪಟ್ಟಕ್ಕೇರಿದ್ದರು. ಪುರುಷರ ಸಿಂಗಲ್ಸ್ ನಲ್ಲಿ ಕೆ. ಶ್ರೀಕಾಂತ್‌ರನ್ನು ಮಣಿಸಿದ್ದ ಪ್ರಣಯ್ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದ್ದರು.

ಸೈನಾ ಹಾಗೂ ಪ್ರಣಯ್ 11ನೆ ರ್ಯಾಂಕಿನಲ್ಲಿದ್ದು ಮುಂದಿನ ತಿಂಗಳಲ್ಲಿ ನಡೆಯಲಿರುವ ದುಬೈ ಸೂಪರ್ ಸರಣಿ ಫೈನಲ್ಸ್‌ಗೆ ಅರ್ಹತೆ ಪಡೆಯಲು ಇನ್ನುಳಿದ ಚೀನಾ ಹಾಗೂ ಹಾಂಕಾಂಗ್ ಓಪನ್‌ನಲ್ಲಿ ಉತ್ತಮ ಸಾಧನೆ ಮಾಡಬೇಕಾಗಿದೆ.

ಸೈನಾ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೆವೆನ್ ಝಾಂಗ್‌ರನ್ನು ಎದುರಿಸಿದರೆ, ಪ್ರಣಯ್ ಅವರು ಕ್ವಾಲಿಫೈಯರ್‌ರನ್ನು ಎದುರಿಸಲಿದ್ದಾರೆ.

ಈ ವರ್ಷ ಐದು ಸೂಪರ್ ಸರಣಿಯಲ್ಲಿ ಫೈನಲ್‌ಗೆ ತಲುಪಿರುವ ಶ್ರೀಕಾಂತ್ ನಾಲ್ಕು ಪ್ರಶಸ್ತಿಗಳನ್ನು ಜಯಿಸಿದ್ದು, ಗಾಯದ ಸಮಸ್ಯೆಯಿಂದಾಗಿ ಈ ಟೂರ್ನಿಯಲ್ಲಿ ಆಡುವುದಿಲ್ಲ.

ಇಂಡಿಯಾ ಓಪನ್ ಹಾಗೂ ಕೊರಿಯಾ ಓಪನ್ ಪ್ರಶಸ್ತಿ ಜಯಿಸಿರುವ ಸಿಂಧು ಕೂಡ ಈ ವರ್ಷ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದು, ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದ್ದಾರೆ. 22ರ ಹರೆಯದ ಸಿಂಧು ಜಪಾನ್‌ನ ಸಯಾಕಾ ಸಾಟೊರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್, ಅಜಯ್ ಜಯರಾಮ್, ವರ್ಮ ಸಹೋದರರಾದ ಸೌರಭ್ ಹಾಗೂ ಸಮೀರ್ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News