ಭಾರತಕ್ಕೆ ಮ್ಯಾನ್ಮಾರ್ ಸವಾಲು

Update: 2017-11-13 18:26 GMT

ಮಾರ್ಗೊವಾ, ನ.13: ಮುಂದಿನ ಆವೃತ್ತಿಯ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಮಂಗಳವಾರ ಮ್ಯಾನ್ಮಾರ್ ತಂಡವನ್ನು ಭಾರತ ಎದುರಿಸಲಿದೆ.

 ಭಾರತ ಈಗಾಗಲೇ 2019ರ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಕಳೆದ ತಿಂಗಳು ಮಕಾವ್ ತಂಡದ ವಿರುದ್ಧ ಅರ್ಹತಾ ಪಂದ್ಯದಲ್ಲಿ 4-1 ಅಂತರದಲ್ಲಿ ಜಯ ಗಳಿಸಿದ್ದ ಭಾರತ ಎಎಫ್‌ಸಿ ಏಷ್ಯನ್ ಕಪ್ ಟೂರ್ನಮೆಂಟ್‌ನಲ್ಲಿ ಅವಕಾಶ ದೃಢಪಡಿಸಿತ್ತು. ಗೆಲುವಿನ ಅಜೇಯ ಓಟ ಮುಂದುವರಿಸಿರುವ ಭಾರತ ಕೂಟದಲ್ಲಿ ಅಗ್ರಸ್ಥಾನ ಪಡೆಯಲು ಮ್ಯಾನ್ಮಾರ್ ತಂಡದ ವಿರುದ್ಧ ಸೆಣಸಾಡಲಿದೆ.

ಮ್ಯಾನ್ಮಾರ್ ತಂಡ ತವರಿನಲ್ಲಿ ಈ ಹಿಂದೆ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ 0-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಮೂರು ದಿನಗಳ ಹಿಂದೆ ಭಾರತಕ್ಕೆ ಆಗಮಿಸಿರುವ ಮ್ಯಾನ್ಮಾರ್ ತಂಡದ ಆಟಗಾರರು ವಾತಾವರಣದ ಬಗ್ಗೆ ಅಧ್ಯಯನ ಮಾಡಿದ್ದಾರೆ. ಮ್ಯಾನ್ಮಾರ್ ಒಂದು ವೇಳೆ ಜಯ ಗಳಿಸಿದರೆ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಅರ್ಹತೆ ಗಳಿಸುವ ಕನಸನ್ನು ಜೀವಂತವಾಗಿರಿಸಲು ಸಾಧ್ಯ.

‘‘ ನಾವು ಉತ್ತಮ ತಯಾರಿಯೊಂದಿಗೆ ಮೂರು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದೇವೆ. ನಮಗೆ ಈ ಪಂದ್ಯದಲ್ಲಿ ಜಯ ಅನಿವಾರ್ಯ. ದುರದೃಷ್ಟವಶಾತ್ ತವರಿನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವಿಗೆ ಅವಕಾಶ ಇದ್ದರೂ, ನಮ್ಮಿಂದ ಗೆಲುವು ಸಾಧ್ಯವಾಗಲಿಲ್ಲ’’ ಎಂದು ಮ್ಯಾನ್ಮಾರ್ ತಂಡದ ಕೋಚ್ ಗೆರ್ಡ್ ಝೈಸೆ ಹೇಳಿದ್ದಾರೆ.

ಭಾರತದ ಕೋಚ್ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ಅವರು ಸುನೀಲ್ ಚೆಟ್ರಿ ನಾಯಕತ್ವದ ತಂಡ ಅಜೇಯವಾಗಿ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆಯಲು ಸಮರ್ಥ ಮಾರ್ಗದರ್ಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News