ಜನವರಿಯಿಂದ ಮಂಗಳೂರಿನ 5 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್: ಮೇಯರ್

Update: 2017-11-14 10:02 GMT

ಮಂಗಳೂರು, ನ.14: ನಗರದ ಐದು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ಗೆ ಕಾಮಗಾರಿ ಮುಂದಿನ ವಾರದಿಂದ ಆರಂಭಗೊಳ್ಳಲಿದ್ದು, ಜನವರಿಗೆ ಸಮತೋಲಿತ ಆಹಾರ ಕಡಿಮೆ ದರದಲ್ಲಿ ಈ ಕ್ಯಾಂಟೀನ್‌ಗಳ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ನಗರದ ಅತ್ತಾವರದ ಸರಕಾರಿ ಸೆಂಟ್ರಲ್ ಮೈದಾನ, ರಿಕ್ರಿಯೇಶನ್ ಗ್ರೌಂಡ್, ದೇರೆಬೈಲ್‌ನಲ್ಲಿ ಕ್ಯಾಂಟೀನ್ ಜತೆ ಮಾಸ್ಟರ್ ಕಿಚನ್ ಹಾಗೂ ಕುಂಜತ್ತಬೈಲ್‌ನ ಕಾವೂರು ಶಾಲೆ ಬಳಿ, ಇಡ್ಯಾ ಗ್ರಾಮದ ಸುರಕ್ಕಲ್‌ನ ಪ್ರೈಮರಿ ಆರೋಗ್ಯ ಸೆಂಟರ್ ಬಳಿ ಈ ಕ್ಯಾಂಟೀನ್‌ಗಳು ಕಾರ್ಯಾರಂಭಿಸಲಿವೆ.

ಈ ಕ್ಯಾಂಟೀನ್‌ಗಳಲ್ಲಿ ಬೆಳಗಿನ ಉಪಹಾರ 5 ರೂ., ಮಧ್ಯಾಹ್ನ ಹಾಗೂ ರಾತ್ರಿಯ ಊಟ 10 ರೂ.ಗಳಲ್ಲಿ ಲಭ್ಯವಾಗಲಿದೆ. ಮಂಗಳೂರು ನಗರ ಪಾಲಿಕೆಯ 5,93,291 ಜನಸಂಖ್ಯೆಯ ಆಧಾರದಲ್ಲಿ 6 ಕ್ಯಾಂಟೀನ್ ಹಾಗೂ ಅಡುಗೆ ಕೋಣೆಯನ್ನು ಆರಂಭಿಸಲು ನಿರ್ದೇಶನ ನೀಡಲಾಗಿದೆ. ಈ ಪೈಕಿ ಕ್ಯಾಂಟೀನ್ ಒಂದನ್ನು ಉಳ್ಳಾಲ ನಗರ ಸಭೆಯಿಂದ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್‌ಗೆ ಸಂಬಂದಿಸಿದ ಕಟ್ಟಡಗಳನ್ನು ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಕಂಪನಿ, ಪೊಲೀಸ್ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಜಾಗದಲ್ಲಿ ಭೂಮಿ ವರ್ಗಾವಣೆ ಪ್ರಕ್ರಿಯೆ ಇಲ್ಲದೆ ನಿರ್ಮಿಸಲು ಅನುಮತಿಸಲಾಗಿದೆ. ಕಟ್ಟಡಗಳನ್ನು ಕೆಆರ್‌ಐಡಿಎಲ್ ಮೂಲಕ 2.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗವುದು. ಕ್ಯಾಂಟೀನ್‌ಗಳ ಅನುಷ್ಠಾನ ಹಾಗೂ ನಂತರದ ಕಾರ್ಯನಿರ್ವಹಣೆ, ಮೇಲ್ವಿಚಾರಣೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ನಿರ್ವಹಿಸಲಿದೆ.

ಆಹಾರ ಪೂರೈಕೆಗೆ ಪ್ರತೀ ತಿಂಗಳಿಗೆ ತಗಲುವ ಸಹಾಯಧನ ಶೇ.30ರಷ್ಟು ಕಾರ್ಮಿಕ ಇಲಾಖೆಯಿಂದ ಪಡೆಯಲಾಗುವುದು. ಬಾಕಿ ಶೇ.70ರಷ್ಟು ಸಹಾಯಧನವನ್ನು ಮನಪಾ ತಮ್ಮ ಸ್ವಂತ ಅನುದಾನದಿಂದ ಭರಿಸಬೇಕಾಗಿದೆ ಎಂದು ಮೇಯರ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಬಿತಾ ಮಿಸ್ಕಿತ್, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News