ಸುಜ್ಲಾನ್ ಲಾಕೌಟ್ ಕಾನೂನು ಬಾಹಿರ: ಜಿಲ್ಲಾಧಿಕಾರಿ

Update: 2017-11-14 14:14 GMT

ಉಡುಪಿ, ನ.14: ಇಂದು ಬೆಳಗಿನ ಜಾವ ಸುಜ್ಲಾನ್ ಕಂಪೆನಿಗೆ ಲಾಕೌಟ್ ಘೋಷಿಸಲಾಗಿದೆ. ನೋಟೀಸ್ ನೀಡದೆ ಏಕಾಏಕಿಯಾಗಿ ಕಂಪೆನಿಯನ್ನು ಮುಚ್ಚಿರುವುದು ಕಾನೂನು ಬಾಹಿರ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ತಾನು, ಎಸ್ಪಿ, ಸುಜ್ಲಾನ್ ಆಡಳಿತ ಮಂಡಳಿ, ಕಾರ್ಮಿಕ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿದ್ದು, ನೋಟೀಸ್ ನೀಡದೆ ಮುಚ್ಚಿರುವುದು ಸರಿಯಲ್ಲ ಎಂಬುದಾಗಿ ಕಂಪೆನಿಗೆ ತಿಳಿಸಿದ್ದೇವೆ. ಈ ವಿಚಾರವನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು ಎಂದು ಸುಜ್ಲಾನ್ ಅಧಿಕಾರಿಗಳು ಸಭೆಯಲ್ಲಿ ಹೇಳಿದ್ದಾರೆ. ಅದೇ ರೀತಿ ಇಂದು ಸಂಜೆ ಶಿವಮೊಗ್ಗದ ಕಾರ್ಮಿಕ ಉಪಆಯುಕ್ತರು ಇಲ್ಲಿಗೆ ಆಗಮಿಸಿ ಪರಿಶೀಲನೆ ಮಾಡಲಿದ್ದಾರೆ ಎಂದರು.

ಸುಜ್ಲಾನ್ ಕಂಪೆನಿಯು ಎಸ್‌ಇಝೆಡ್ ಅಧಿಕಾರದ ವ್ಯಾಪ್ತಿಗೆ ಬರುವುದ ರಿಂದ ಕೇರಳದಲ್ಲಿರುವ ಎಸ್‌ಇಝೆಡ್ ಡೆವಲೆಪ್‌ಮೆಂಟ್ ಕಮಿಷನರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಅವರು ಸಹ ಒಂದೆರಡು ದಿನಗಳಲ್ಲಿ ಒಂದು ತಂಡವನ್ನು ಇಲ್ಲಿಗೆ ಕಳುಹಿಸಿಕೊಡಲಿದ್ದಾರೆ. ಕಂಪೆನಿ ಮುಚ್ಚುವುದರಿಂದ ಇದರಲ್ಲಿರುವ ಸುಮಾರು 600 ಮಂದಿ ನೌಕರರು ಬೀದಿ ಪಾಲಾಲಿದ್ದಾರೆ ಎಂದು ಅವರು ಹೇಳಿದರು.

ಕಾರ್ಮಿಕರು ಉದ್ದೇಶಪೂರ್ವಕವಾಗಿ ಉತ್ಪಾದನೆಯಲ್ಲಿ ವಿಳಂಬ ಮಾಡಿ ಗುರಿ ತಲುಪದೆ ಇರುವುದು ಮತ್ತು ನ.2ಕ್ಕೆ ಮುಷ್ಕರ ಹೂಡುವುದಾಗಿ ನೋಟೀಸ್ ನೀಡಿರುವುದರಿಂದ ಕಂಪೆನಿಯನ್ನು ಮುಚ್ಚಲಾಗಿದೆ ಎಂಬುದು ಕಂಪೆನಿಯ ಹೇಳಿಕೆ. ಆದರೆ ಯಾವುದೇ ಕಾರಣ ಇದ್ದರೂ ನೋಟೀಸ್ ನೀಡದೆ ರಾತ್ರೋರಾತ್ರಿ ಕಂಪೆನಿ ಮುಚ್ಚುಗಡೆ ಮಾಡಿರುವುದು ತಪ್ಪು. 14ದಿನಗಳ ಮೊದಲೇ ನೋಟೀಸ್ ನೀಡಬೇಕು ಮತ್ತು ಈ ವಿಚಾರವನ್ನು ಸರಕಾರದ ಗಮನಕ್ಕೂ ತರಬೇಕು. ಆದರೆ ಕಂಪೆನಿಯವರು ಇವು ಯಾವುದನ್ನೂ ಕೂಡ ಪಾಲಿಸಿಲ್ಲ. ಕಂಪೆನಿ ಮುಚ್ಚುವುದಾದರೆ ಸರಕಾರ ನೀಡಿರುವ ಭೂಮಿಯನ್ನು ವಾಪಾಸ್ಸು ಪಡೆದುಕೊಳ್ಳಬೇಕಾಗುತ್ತದೆ. ಕೆಐಇಡಿಬಿ ಸುಮಾರು 600 ಎಕರೆ ಜಾಗ ಸುಜ್ಲಾನ್‌ಗೆ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
 
ಗಾಳಿಯಂತ್ರ ತಯಾರಿಕಾ ಘಟಕ
ಕಳೆದ 12 ವರ್ಷಗಳಿಂದ ಪಡುಬಿದ್ರಿಯಲ್ಲಿ ಸುಜ್ಲಾನ್ ಕಂಪೆನಿಯು ಪವನ ವಿದ್ಯುತ್ ಯೋಜನೆಯ ರೆಕ್ಕೆಗಳು ಹಾಗೂ ಬಿಡಿಭಾಗ ನಿರ್ಮಾಣ ಘಟಕವನ್ನು ನಡೆಸುತ್ತಿದೆ. ಸುಜ್ಲಾನ್ ಎನರ್ಜಿ ಲಿ., ಕೊಚ್ಚಿನ್ ಎಸ್‌ಇಝಡ್ ಅಭಿವೃದ್ಧಿ ಆಯುಕ್ತರ ಅಧೀನಕ್ಕೊಳಪಟ್ಟಿದ್ದು, ಅವರು ಇದರ ನಿಯಂತ್ರಣ ಹೊಂದಿದ್ದಾರೆ. ಆರು ತಿಂಗಳ ಹಿಂದೆ 700ಕ್ಕೂ ಅಧಿಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರನ್ನು ವಜಾಗೊಳಿಸಿದ್ದು, ಆ ಬಳಿಕ ನಡೆದ ಪ್ರತಿಭಟನೆಯ ಬಳಿಕ 200 ಮಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. 15 ದಿನಗಳ ಹಿಂದಷ್ಟೇ 130 ಕಾರ್ಮಿಕನ್ನು ಮತ್ತೆ ವಜಾಗೊಳಿಸಲಾಗಿತ್ತು.

ಜಿಎಸ್‌ಟಿ ಬಳಿಕ ಸಮಸ್ಯೆ
ಕಂಪೆನಿ ಕಾರ್ಮಿಕ ಬೀದರ್‌ನ ಅನಿಲ್ ಮುದ್ದೆ ಎಂಬವರು ಪತ್ರಿಕೆಯೊಂದಿಗೆ ಮಾತನಾಡಿ ಕಳೆದ 10ವರ್ಷಗಳಿಂದ ನಾನಿಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಆರಂಭದಲ್ಲಿ 5500 ರೂ. ಸಂಬಳ ನೀಡಲಾಗುತ್ತಿತ್ತು. ಈಗ ಅದು 15,000 ರೂ. ಆಗಿದೆ. ಆದರೆ ಕಳೆದ ತಿಂಗಳು ಅರ್ಧದಷ್ಟು ಕಡಿತಗೊಳಿಸಿ 8000ರೂ. ಮಾತ್ರ ನೀಡಿದ್ದಾರೆ. ಈಗಾಗಲೇ 500ಕ್ಕೂ ಅಧಿಕ ಬ್ಲೇಡ್‌ಗಳು ತಯಾರಿಗೆ ಬಾಕಿ ಇವೆ. ಆದರೆ ಕಂಪೆನಿಗೆ ಜಿಎಸ್‌ಟಿಯಿಂದ ಸಮಸ್ಯೆಯಾಗಿದೆ. ಜಿಎಸ್‌ಟಿ ಯಿಂದ ಬ್ಲೇಡ್‌ಗಳ ಬೆಲೆ ಕಡಿಮೆಯಾಗಿದ್ದು, ಮತ್ತೆ ಜಾಸ್ತಿಯಾಗುವುದಕ್ಕಾಗಿ ಮಾರಾಟ ಮಾಡದೆ ಇಟ್ಟಿದ್ದಾರೆ ಎಂದರು.

ನೋಟೀಸು ಕಡ್ಡಾಯ ನೀಡಬೇಕು

ಯಾವುದೇ ಕಂಪೆನಿ ಲಾಕೌಟ್ ಘೋಷಿಸುವ ಮುನ್ನ 14 ದಿನ ಮೊದಲೇ ಕಾರ್ಮಿಕರಿಗೆ ಹಾಗೂ ಇಲಾಖೆಗೆ ಅಲ್ಲದೇ ಜಿಲ್ಲಾಧಿಕಾರಿಗಳಿಗೂ ನೋಟೀಸು ಮಾಡಬೇಕು. ಆದರೆ ಸುಜ್ಲಾನ್ ಕಂಪೆನಿ ಇಂಥ ಯಾವುದೇ ಮಾಹಿತಿ ನೀಡದೆ ನಷ್ಟದ ನೆಪ ಮುಂದೊಡ್ಡಿ ಏಕಾಏಕಿಯಾಗಿ ಕಂಪೆನಿಯನ್ನು ಮುಚ್ಚಿದೆ. ನಮ್ಮ ಇಲಾಖೆಗೂ ಇಂದು ಬೆಳಗ್ಗೆಯಷ್ಟೇ ಈ ಮಾಹಿತಿ ಲಭಿಸಿದೆ. ವಿಶೇಷ ಆರ್ಥಿಕ ವಲಯ ಆಗಿರುವುದರಿಂದ ವಿಶೇಷ ಕಾರ್ಮಿಕ ಕಾನೂನುಗಳಿವೆ. ಇದರ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು.

*ನಾವು 326 ಮಂದಿ ಕಂಪೆನಿ ಕಾರ್ಮಿಕರಿದ್ದೇವೆ. 200 ಮಂದಿ ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತಿದ್ದಾರೆ. ನಮಗೆ ಯಾವುದೇ ನೋಟೀಸು ನೀಡಲಿಲ್ಲ. ನಾವು ಇಂದು ಬೆಳಗ್ಗೆ ಕೆಲಸಕ್ಕೆ ಬಂದು ನೋಡುವಾಗ ಗೇಟಿನಲ್ಲಿ ನೋಟೀಸು ಹಚ್ಚಲಾಗಿದೆ. ಗೇಟಿಗೆ ಬೀಗ ಹಾಕಲಾಗಿದೆ. ಬರಲು ಬಸ್ಸಿನ ವ್ಯವಸ್ಥೆಯೂ ಇರಲಿಲ್ಲ. ಈ ಬಗ್ಗೆ ಕಂಪೆನಿಯ ಇಂಜಿನಿಯರ್‌ರಲ್ಲಿ ಕೇಳಿದಾಗ ಬಸ್ಸು ನಿಲುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮೊದಲು ಹೊರ ಗುತ್ತಿಗೆ ಆಧಾರದ 750 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇದರಿಂದ ನಮಗೆಲ್ಲರಿಗೂ ತುಂಬಾ ತೊಂದರೆಯಾಗಿದೆ.

-ಮಂಜುನಾಥ್ ತೋರ್ಲೇಕರ್, ಕಾರ್ಮಿಕ

ಎಂಟು ವರ್ಷದಿಂದ ನಾವು ದುಡಿಯುತಿದ್ದೇವೆ. ನಮ್ಮಿಂದ ಯಾವುದೇ ತೊಂದರೆಯಾಗಿಲ್ಲ. ಇದೀಗ ನಮ್ಮಿಂದ ನಷ್ಟ ಆಗಿದೆ ಎಂದು ಕಂಪೆನಿ ಹೇಳುತ್ತಿದೆ. ಕಂಪೆನಿಯ ಯಂತ್ರಗಳಿಗೆ ಯಾವುದೇ ತೊಂದರೆ ಮಾಡಲಿಲ್ಲ. ಹಾಗೆ ತೊಂದರೆ ಯಾಗಿದ್ದಲ್ಲಿ ಯೋಜನಾ ಮುಖ್ಯಸ್ಥರು ನಮಗೆ ನೋಟೀಸು ನೀಡಬೇಕಿತ್ತು. ಕಂಪೆನಿಯ ಸಿಸಿ ಕ್ಯಾಮರಾವನ್ನು ಕೂಡಾ ಪರಿಶೀಲಿಸಬಹುದು. ತಯಾರು ಮಾಡಿದ ಬ್ಲೇಡ್ ಮಾರಾಟ ಮಾಡಿದರೆ ನಷ್ಟ ಆಗುವುದಿಲ್ಲ. ನಮಗೆ ಪರಿಹಾರ ನೀಡಬೇಕು.

-ಚೇತನ್, ಕಾರ್ಮಿಕ

ಸುಜ್ಲಾನ್ ಲಾಕೌಟ್‌ಗೆ ಕೆಲಸಗಾರರೇ ಕಾರಣ: ಕಂಪೆನಿ
ಸುಜ್ಲಾನ್ ಎನರ್ಜಿ ಲಿ. ಇಂದು ತನ್ನ ಗಾಳಿಯಂತ್ರ ತಯಾರಿಕಾ ಘಟಕದ ಲಾಕೌಟ್ ಘೋಷಿಸಲು ಕಂಪೆನಿಯಲ್ಲಿರುವ ಕೆಲಸಗಾರರೇ ಕಾರಣರಾಗಿದ್ದಾರೆ ಎಂದು ಕಂಪೆನಿಯ ಲಾಕೌಟ್ ನೋಟೀಸಿನಲ್ಲಿ ಆರೋಪಿಸಲಾಗಿದೆ.

ಕಳೆದ ಏಳು ತಿಂಗಳಿನಿಂದ ಕೆಲಸಗಾರರು ‘ನಿಧಾನಗತಿ’ ಕೆಲಸದ ತಂತ್ರ ಅನುಸರಿಸಿ ದ್ದರಿಂದ ಕಂಪೆನಿಯ ಉತ್ಪಾದನೆ ಶೇ.60ರಷ್ಟು ಕುಸಿದಿತ್ತು. ಸುಜ್ಲಾನ್ ನೌಕರರ ಯೂನಿಯನ್ ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಇವರು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂದು ನೋಟೀಸಿನಲ್ಲಿ ಹೇಳಲಾಗಿದೆ.

ಒಪ್ಪಂದದಂತೆ ಪ್ರತಿ ತಿಂಗಳು ಎರಡು ಉತ್ಪಾದನಾ ಲೈನ್‌ನಲ್ಲಿ 14 ಸೆಟ್ ಬ್ಲೇಡ್‌ಗಳನ್ನು ಹಾಗೂ ನಾಲ್ಕು ಉತ್ಪಾದನಾ ಲೈನ್‌ಗಳಿಂದ 28 ಸೆಟ್ ಬ್ಲೇಡ್‌ಗಳನ್ನೂ ಉತ್ಪಾದಿಸಬೇಕಾಗಿತ್ತು. ಆದರೆ ದುರಾದೃಷ್ಟಕ್ಕೆ 2017ರ ಎಪ್ರಿಲ್‌ನಿಂದ ಅಕ್ಟೋಬರ್ ತಿಂಗಳವರೆಗೆ 214 ಬ್ಲೇಡ್‌ಸೆಟ್ ತಯಾರಾಗ ಬೇಕಿದ್ದಲ್ಲಿ ಕೇವಲ 76ನ್ನು ಮಾತ್ರ ತಯಾರಿಸಲಾಗಿದೆ. ಇದು ಕೆಲಸಗಾರರ ಅತೀ ದೊಡ್ಡ ಅಶಿಸ್ತಾಗಿದೆ. ಆಡಳಿತ ಮಂಡಳಿ ಪ್ರತಿ ದಿನವೆಂಬಂತೆ ನಿಧಾನಗತಿ ಕೆಲಸ ಬಿಟ್ಟು ಸಾಮಾನ್ಯ ರೀತಿಯ ಉತ್ಪಾದನೆಗೆ ಮುಂದಾಗಿ ಎಂದು ಮನವಿ ಮಾಡಿಕೊಂಡರೂ ಅದು ಯಾವುದೇ ಫಲ ನೀಡಿರಲಿಲ್ಲ. ಈ ನಡುವೆ ಕೆಲಸಗಾರರು ಅನೇಕ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿ ಕಂಪೆನಿಗೆ ಒಂದು ಕೋಟಿ ರೂ.ನಷ್ಟು ನಷ್ಟ ಉಂಟು ಮಾಡಿದ್ದರು. ಇವುಗಳಲ್ಲಿ ವಿವಿಧ ಯಂತ್ರಗಳಿಗೆ ಹಾನಿಯುಂಟು ಮಾಡುವುದು, ಅವುಗಳು ಕೆಲಸ ಮಾಡದಂತೆ ನೋಡಿಕೊಳ್ಳು ವುದು. ಸಿಸಿಟಿವಿ ಸೇರಿದಂತೆ ವಿವಿಧ ಕೇಬಲ್‌ಗಳನ್ನು ತುಂಡರಿಸಿದ್ದು ಸೇರಿವೆ.

 ಸಮಸ್ಯೆ ಬಗೆಹರಿಸಲು ಆಡಳಿತ ಮಂಡಳಿ ಹಾಗೂ ಕೆಲಸಗಾರರ ಹಲವು ಸಭೆಗಳನ್ನು ಕರೆಯಲಾಯಿತು. ಆದರೆ ಕೆಲಸಗಾರರು ಹಾಗೂ ನೌಕರರ ಸಂಘದ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಕಳೆದ ಅ.25ರಂದು ಸುಧೀರ್ ಎಸ್. ಸಾಲ್ಯಾನ್, ಕೀರ್ತಿರಾಜ್, ನಾಗರಾಜ್ ಎನ್, ಸುದರ್ಶನ್ ನಾಯಕ್, ಸಿಬಾರಂಜನ್ ಮಹಾಂತಿ, ಶರತ್ ಎ. ಎಂಬ ಕಾರ್ಮಿಕರು ಆ್ಯಂಟನಿ ಫಿಲಿಪ್ ಎಂಬ ಹಿರಿಯ ಆಧಿಕಾರಿಗೆ ಬೆದರಿಕೆಯನ್ನು ಹಾಕಿದರು. ಇದರ ನಂತರ ನಾವು ಪೊಲೀಸರ ರಕ್ಷಣೆಯನ್ನು ಪಡೆಯಬೇಕಾಯಿತು ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ.

ಇದರ ನಂತರವೂ ನೌಕರರ ದುರ್ವತನೆ ಮುಂದುವರಿದು, ನ.2ರಿಂದ 6ರವರೆಗೆ ಕೆಲಸದ ಅವಧಿಯಲ್ಲಿ ಕಾರ್ಖಾನೆ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿ ಭಯದ ವಾತಾವರಣ ನಿರ್ಮಿಸಿದರು. 6ರಂದು ಅಧಿಕಾರಿಗಳಿಗೆ ಮುತ್ತಿಗೆ, ಬೆದರಿಕೆ ಒಡ್ಡುವ ಪ್ರಯತ್ನವೂ ನಡೆಯಿತು. ಹಿರಿಯ ಪೊಲೀಸ್ ಅಧಿಕಾರಿಗಳ ನೆರವಿನಿಂದ ಅವರನ್ನು ತೆರವುಗೊಳಿಸಬೇಕಾಯಿತು. ನೌಕರರ ಭಯೋತ್ಪಾದಕ ರೀತಿಯ ಚಟುವಟಿಕೆಗಳಿಂದ ಆಡಳಿತ ಮಂಡಳಿಗೆ ಬೇರೆ ಮಾರ್ಗವೇ ಉಳಿದಿಲ್ಲ ಎಂದು ನೋಟೀಸಿನಲ್ಲಿ ವಿವರಿಸಲಾಗಿದೆ.

ಈ ಎಲ್ಲಾ ಕಾರಣಗಳಿಂದ ಕಾರ್ಖಾನೆಗೆ ಲಾಕೌಟ್ ಘೋಷಿಸದೇ ಬೇರೆ ಯಾವುದೇ ಮಾರ್ಗ ಉಳಿದಿರಲಿಲ್ಲ. ಹೀಗಾಗಿ ನ.29ರಿಂದ ಸುಜ್ಲಾನ್ ಉತ್ಪಾದನಾ ಘಟಕಕ್ಕೆ ಲಾಕೌಟ್ ಘೋಷಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ನ.14ರಿಂದಲೇ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಪ್ಲಾಂಟ್‌ಹೆಡ್ ದಕ್ಷಿಣಾಮೂರ್ತಿ ಸಹಿ ಮಾಡಿದ ನೋಟೀಸಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News