ಭಾರತ-ಮ್ಯಾನ್ಮಾರ್ ಫುಟ್ಬಾಲ್ ಪಂದ್ಯ ಡ್ರಾ

Update: 2017-11-14 18:12 GMT

ಮಾರ್ಗೊವಾ, ನ.14: ಭಾರತ ಮತ್ತು ಮ್ಯಾನ್ಮಾರ್ ತಂಡಗಳ ನಡುವೆ ಇಲ್ಲಿ ಮಂಗಳವಾರ ನಡೆದ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ‘ಎ’ ಗುಂಪಿನ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಮುಕ್ತಾಯಗೊಂಡಿದೆ.

ಇದರೊಂದಿಗೆ ಭಾರತ 13 ಪಂದ್ಯಗಳಲ್ಲಿ ಗೆಲುವಿನ ಅಜೇಯ ದಾಖಲೆ ಮುಂದುವರಿಸಿದೆ. ಭಾರತ ‘ಎ’ ಗುಂಪಿನಲ್ಲಿ 5 ಪಂದ್ಯಗಳಲ್ಲಿ 13 ಅಂಕ ಪಡೆದು ಅಗ್ರಸ್ಥಾನ ಗಳಿಸಿದೆ. ಮ್ಯಾನ್ಮಾರ್ 4 ಪಂದ್ಯಗಳಲ್ಲಿ 5 ಅಂಕಗಳನ್ನು ಗಿಟ್ಟಿಸಿಕೊಂಡು ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

   ಮ್ಯಾನ್ಮಾರ್‌ನ ಯ್ಯಾನ್ ನೈಂಗ್ ಓ ಮತ್ತು ಕಿಯಾವ್ ಕೊ ಕೊ ತಲಾ ಒಂದು ಗೋಲು ದಾಖಲಿಸಿದರು. ಭಾರತದ ಸುನೀಲ್ ಚೆಟ್ರಿ ಮತ್ತು ಜೀಜೆ ಲಾಲ್‌ಪೆಕ್ಲುವಾ ತಲಾ ಒಂದು ಗೋಲು ದಾಖಲಿಸಿದರು. ನೆಹರೂ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದ ಮೊದಲ ನಿಮಿಷದಲ್ಲಿ ಮ್ಯಾನ್ಮಾರ್‌ನ ಯ್ಯಾನ್ ಅವರು ಗೋಲು ದಾಖಲಿಸಿ ತಂಡಕ್ಕೆ 1-0 ಮುನ್ನಡೆಗೆ ಸಹಾಯ ಮಾಡಿದರು. 12ನೇ ನಿಮಿಷದಲ್ಲಿ ಭಾರತದ ಚೆಟ್ರಿ ಪೆನಾಲ್ಟಿ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು.

   19ನೇ ನಿಮಿಷದಲ್ಲಿ ಕೊ ಕೊ ಗೋಲು ಜಮೆ ಮಾಡಿ ಮ್ಯಾನ್ಮಾರ್‌ಗೆ 2-1 ಮುನ್ನಡೆ ದೊರಕಿಸಿಕೊಟ್ಟರು. ಭಾರತಕ್ಕೆ ಸೋಲಿನ ಭೀತಿ ಎದುರಾಗಿತ್ತು. ಆದರೆ ಜೇಜೆ ಗೋಲು ಜಮೆ ಮಾಡಿ 2-2 ಸಮಬಲ ಸಾಧಿಸುವ ಮೂಲಕ ಭಾರತದ ಅಜೇಯ ಗೆಲುವಿನ ದಾಖಲೆಯನ್ನು ಮುಂದುವರಿಸಲು ನೆರವಾದರು.

 ಭಾರತ ಯಾಂಗಾನ್‌ನಲ್ಲಿ ಕಳೆದ ಮಾರ್ಚ್‌ನಲ್ಲಿ ನಡೆದ ಪಂದ್ಯದಲ್ಲಿ ಮ್ಯಾನ್ಮಾರ್ ವಿರುದ್ಧ 1-0 ಗೆಲುವು ದಾಖಲಿಸಿತ್ತು. ಕಳೆದ ತಿಂಗಳು ಬೆಂಗಳೂರಿನಲ್ಲಿ ಮಕಾವು ವಿರುದ್ಧ ಭಾರತ 4-1 ಅಂತರದಲ್ಲಿ ಭರ್ಜರಿ ಗೆಲುವಿನೊಂದಿಗೆ 2019ರಲ್ಲಿ ಯುಎಇಯಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್ ಟೂರ್ನಮೆಂಟ್‌ಗೆ ಅರ್ಹತೆ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News