60 ವರ್ಷಗಳ ಬಳಿಕ ವಿಶ್ವಕಪ್ ನಿಂದ ಹೊರಗುಳಿದ ಇಟಲಿ

Update: 2017-11-14 18:21 GMT

ಮಿಲಾನ್, ನ.14: ಸ್ವೀಡನ್ ವಿರುದ್ಧ ಎರಡನೆ ಪ್ಲೇ-ಆಫ್ ಪಂದ್ಯದಲ್ಲಿ ಗೋಲುರಹಿತ ಡ್ರಾಗೊಳಿಸಿರುವ ಇಟಲಿ ತಂಡ 1958ರ ಬಳಿಕ ಇದೇ ಮೊದಲ ಬಾರಿ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ.

ಸ್ವೀಡನ್ ತಂಡ ಮೊದಲ ಪ್ಲೇ-ಆಫ್ ಪಂದ್ಯದಲ್ಲಿ 1-0 ಅಂತರದಿಂದ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ.

 ಸ್ಟಾಕ್‌ಹೋಮ್‌ನಲ್ಲಿ ನಡೆದಿದ್ದ ಮೊದಲ ಪ್ಲೇ-ಆಫ್ ಪಂದ್ಯದಲ್ಲಿ ಜಾಕಬ್ ಜಾನ್ಸನ್ ಬಾರಿಸಿದ್ದ ಏಕೈಕ ಗೋಲಿನ ನೆರವಿನಿಂದಾಗಿ 1-0 ಅಂತರದಿಂದ ಜಯ ಸಾಧಿಸಿದ್ದ ಸ್ವೀಡನ್ 2006ರ ಬಳಿಕ ವಿಶ್ವಕಪ್‌ನಲ್ಲಿ ಅರ್ಹತೆ ಪಡೆದಿದೆ.

 74,000 ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಇಟಲಿ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದರೂ ಗೋಲು ಬಾರಿಸಲು ವಿಫಲವಾಯಿತು. ಇಟಲಿ ಮೂರನೆ ಬಾರಿ ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತವಾಗಿದೆ. ಈಹಿಂದೆ 1930ರಲ್ಲಿ ನಡೆದ ಮೊದಲ ಆವೃತ್ತಿಯ ವಿಶ್ವಕಪ್‌ನಲ್ಲಿ ಭಾಗವಹಿಸಿರಲಿಲ್ಲ. 1958ರಲ್ಲಿ ಸ್ವೀಡನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯಲು ವಿಫಲವಾಗಿತ್ತು.

ಇಟಲಿ ತಂಡದ ವಿಶ್ವಕಪ್‌ನಲ್ಲಿ ಆಡುವ ಕನಸು ಈಡೇರದ ಹಿನ್ನೆಲೆಯಲ್ಲಿ ತಂಡದ ಐಕಾನ್ ಗೋಲ್‌ಕೀಪರ್ ಗಿಯಾನ್‌ಲುಗಿ ಬಫನ್ ಆರನೆ ಬಾರಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಿ ದಾಖಲೆ ನಿರ್ಮಿಸುವ ಅವಕಾಶ ತಪ್ಪಿಹೋಗಿದೆ.

39ರ ಹರೆಯದ ಬಫನ್ ಇಟಲಿ ಪರ 175 ಪಂದ್ಯಗಳನ್ನು ಆಡಿದ್ದು ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್ ತನ್ನ ಕೊನೆಯ ಪಂದ್ಯ ಎಂದು ಈ ಮೊದಲೇ ಘೋಷಿಸಿದ್ದರು. ಆದರೆ, ಇಟಲಿ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯದ ಕಾರಣ ತವರು ಮೈದಾನದಲ್ಲಿ ಕಣ್ಣೀರಿನ ವಿದಾಯ ಹೇಳಿದ್ದಾರೆ.

  ‘‘ನನ್ನನ್ನು ಕ್ಷಮಿಸಿಬಿಡಿ. ನಾನು ನನ್ನ ಪರವಾಗಿ ಮಾತ್ರವಲ್ಲ ಇಟಲಿಯ ಫುಟ್ಬಾಲ್ ಪರ ಕ್ಷಮೆ ಯಾಚಿಸುತ್ತೇನೆ. ವಿಶ್ವಕಪ್‌ಗೆ ಅರ್ಹತೆ ಪಡೆಯದೇ ಇರುವುದಕ್ಕೆ ಬೇಸರವಾಗಿದೆ. ಇದು ನನ್ನ ಕೊನೆಯ ಪಂದ್ಯವಾಗಿದೆ. ನಾನು ಪ್ರತಿಭಾವಂತ ತಂಡವನ್ನು ತ್ಯಜಿಸುತ್ತಿದ್ದೇನೆ. ನನಗೆ ಬೆಂಬಲ ನೀಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದು ಬಫನ್ ಹೇಳಿದ್ದಾರೆ.

ಸ್ವೀಡನ್ ತಂಡ ಕಳೆದ ಎರಡು ಆವೃತ್ತಿಯಲ್ಲಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. 2006ರಲ್ಲಿ ಕೊನೆಯ ಬಾರಿ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡಿತ್ತು. ‘‘ನನಗೆ ಅತ್ಯಂತ ಆನಂದವಾಗುತ್ತಿದೆ. ಈ ಪಂದ್ಯ ನಮ್ಮ ತಂಡದ ಸಾಂಘಿಕ ಶಕ್ತಿಯನ್ನು ತೋರಿಸುತ್ತದೆ.ಸ್ಟಾರ್ ಆಟಗಾರ ಝ್ಲಾಟನ್ ಇಬ್ರಾಹಿಮೊವಿಕ್ ಅನುಪಸ್ಥಿತಿಯಲ್ಲೂ ನಾವು ವಿಭಿನ್ನವಾಗಿ ಆಡಿದ್ದೇವೆ. ಅವರು 2016ರಲ್ಲಿ ಯುರೋ ಕಪ್ ಬಳಿಕ ನಿವೃತ್ತಿಯಾಗಿದ್ದಾರೆ. ಅವರೋರ್ವ ಚಾಂಪಿಯನ್ ಆಟಗಾರನಾಗಿದ್ದರು’’ ಎಂದು ಸ್ವೀಡನ್ ಕೋಚ್ ಜಾನ್ ಆ್ಯಂಡರ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News