ಅಗ್ರ ಸ್ಥಾನಕ್ಕೇರಲು ಜಡೇಜಗೆ ಶ್ರೀಲಂಕಾ ಸರಣಿ ಉತ್ತಮ ಅವಕಾಶ

Update: 2017-11-14 18:24 GMT

ದುಬೈ, ನ.14: ಸೌರಾಷ್ಟ್ರದ ಆಟಗಾರ ರವೀಂದ್ರ ಜಡೇಜಗೆ ಐಸಿಸಿ ರ್ಯಾಂಕಿಂಗ್‌ನಲ್ಲಿ ಬೌಲಿಂಗ್ ಹಾಗೂ ಆಲ್‌ರೌಂಡರ್ ಪಟ್ಟಿಯಲ್ಲಿ ಅಗ್ರ ಸ್ಥಾನ ವಶಪಡಿಸಿಕೊಳ್ಳಲು ಗುರುವಾರದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಅತ್ಯಂತ ಮುಖ್ಯವಾಗಿದೆ.

28ರ ಹರೆಯದ ಜಡೇಜ ಈತನಕ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 155 ವಿಕೆಟ್ ಹಾಗೂ 1,136 ರನ್ ಕಲೆ ಹಾಕಿದ್ದಾರೆ. ಪ್ರಸ್ತುತ ಬೌಲರ್ ಹಾಗೂ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್‌ಗಿಂತ 12 ಅಂಕ ಹಿಂದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್‌ಗಿಂತ 8 ಅಂಕ ಹಿಂದಿದ್ದಾರೆ.

 ಒಂದು ವೇಳೆ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಜಡೇಜ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರೆ ಮತ್ತೊಮ್ಮೆ ಅಗ್ರ ಸ್ಥಾನವನ್ನು ಪಡೆಯಬಹುದು. ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ 2ನೆ ಟೆಸ್ಟ್ ಪಂದ್ಯದ ವೇಳೆ ಜಡೇಜ ನಂ.1ಸ್ಥಾನದಲ್ಲಿದ್ದರು. ಆರನೆ ರ್ಯಾಂಕಿನಲ್ಲಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಅಗ್ರ-5ರಲ್ಲಿ ವಾಪಸಾಗುವತ್ತ ಚಿತ್ತವಿರಿಸಿದ್ದಾರೆ. ಆಸ್ಟ್ರೇಲಿಯದ ಡೇವಿಡ್ ವಾರ್ನರ್‌ಗಿಂತ ಒಂದು ಅಂಕ ಹಿಂದಿದ್ದಾರೆ.

ಲೋಕೇಶ್ ರಾಹುಲ್(8) ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ(9) ಟಾಪ್-10ರಲ್ಲಿದ್ದಾರೆ. ಶಿಖರ್ ಧವನ್(30ನೆ), ಮುರಳಿ ವಿಜಯ್(36ನೆ ಸ್ಥಾನ) ಹಾಗೂ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ(47ನೆ ಸ್ಥಾನ) ಅಗ್ರ-20ರಿಂದ ಹೊರಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News