ಕಲ್ಲೇರಿಯಲ್ಲಿನ ಮೊಬೈಲ್ ಶಾಪ್‌ಗೆ ಬೆಂಕಿ, ಚಿಕನ್ ಸೆಂಟರ್‌ನಿಂದ ಕಳವು ಪ್ರಕರಣ ಭೇದಿಸಿದ ಪೊಲೀಸರು

Update: 2017-11-15 05:36 GMT

ಉಪ್ಪಿನಂಗಡಿ, ನ.15: ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಪಂ ವ್ಯಾಪ್ತಿಯ ಕಲ್ಲೇರಿಯಲ್ಲಿ ಇತ್ತೀಚೆಗೆ ಮೊಬೈಲ್ ಅಂಗಡಿಗೆ ಬೆಂಕಿ ಹಚ್ಚಿದ ಹಾಗೂ ಸಮೀಪದ ಚಿಕನ್ ಸೆಂಟರ್‌ವೊಂದರಿಂದ ನಡೆದ ಕಳವು ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಫಾರೂಕ್, ಉಮರ್ ಹಾಗೂ ಉಬೈದ್ ಎಂದು ಗುರುತಿಸಲಾಗಿದೆ. ಇವರೆಲ್ಲ ಬಂಟ್ವಾಳ ಪರಿಸರದವರೆಂದು ಪೊಲೀಸರು ತಿಳಿಸಿದ್ದಾರೆ.

 ನ.8ರಂದು ಕಲ್ಲೇರಿ ಬಳಿ ಕುಪ್ಪೆಟ್ಟಿ ರಾಜ್ಯ ಹೆದ್ದಾರಿಗೆ ಸಮೀಪದಲ್ಲಿರುವ ಮೋಹನ ಎಂಬವರ ಶ್ರೀಗುರು ಚಿಕನ್ ಸೆಂಟರ್‌ನ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು ಅಲ್ಲಿದ್ದ ಸುಮಾರು 8 ಟೈಸನ್ ಕೋಳಿ ಹಾಗೂ ಒಂದು ಕತ್ತಿ, ಅಳತೆ ಮಾಪನ ಸಹಿತ ಚಿಲ್ಲರೆ ಹಣವನ್ನು ದೋಚಿದ್ದರು. ಅಲ್ಲದೆ ಇಲ್ಲೇ ಪಕ್ಕದಲ್ಲಿರುವ ಕಲ್ಲೇರಿ ಜಂಕ್ಷನ್‌ನಲ್ಲಿರುವ ಮುಹಮ್ಮದ್ ಶಮೀರ್ ಎಂಬವರ ಮೊಬೈಲ್ ಅಂಗಡಿಯ ಶಟರ್ ಮುರಿದು ಒಳನುಗ್ಗಿ ಅಂಗಡಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿರುವ ಬಗ್ಗೆ ಶಮೀರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಿಜೆಪಿಯ ಪರಿವರ್ತನಾ ಯಾತ್ರೆ ದ.ಕ. ಜಿಲ್ಲೆಯನ್ನು ಪ್ರವೇಶಿಸುವ ಸಂದರ್ಭ ಹಾಗೂ ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ನಡೆದಿದ್ದ ಈ ಬೆಂಕಿ ಪ್ರಕರಣ ಉಪ್ಪಿನಂಗಡಿ ಪೊಲೀಸರ ನಿದ್ದೆಗೆಡಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಪ್ರಕರಣವನ್ನು ಶೀಘ್ರವಾಗಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಗುರು ಚಿಕನ್ ಸೆಂಟರ್‌ನಲ್ಲಿ ಕಳ್ಳತನ ನಡೆದಿದ್ದುದರಿಂದ ಮೊಬೈಲ್ ಅಂಗಡಿಯಲ್ಲೂ ಕಳ್ಳತನ ಎಸಗಿ ಕೃತ್ಯದ ಬಳಿಕ ಸಾಕ್ಷ ನಾಶಪಡಿಸಲು ಕಳ್ಳರು ಬೆಂಕಿ ಹಚ್ಚಿರಬಹುದೆಂಬ ಶಂಕೆಯುಂಟಾಗಿತ್ತು. ಈ ಶಂಕೆ ಇದೀಗ ನಿಜವಾಗಿದ್ದು, ಆರೋಪಿಗಳು ಕಂಬಿ ಎಣಿಸುವಂತಾಗಿದೆ. ಬಂಧಿತರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News