ಸುಝ್ಲಾನ್ ಲಾಕೌಟ್: ಮುಂದುವರಿದ ಕಾರ್ಮಿಕರ ಪ್ರತಿಭಟನೆ

Update: 2017-11-15 08:07 GMT

ಪಡುಬಿದ್ರೆ, ನ.15: ಸುಝ್ಲಾನ್ ಕಂಪೆನಿ ಮಂಗಳವಾರ ಮುಂಜಾನೆ ದಿಢೀರ್ ಮುಚ್ಚುಗಡೆ ಘೋಷಣೆ ಮಾಡಿದ್ದರಿಂದ ಬೀದಿಪಾಲಾದ ಕುಟುಂಬಗಳು ಬುಧವಾರವೂ ಪ್ರತಿಭಟನೆ ಮುಂದುವರಿಸಿದೆ.

ಕೆಲಸ ಕಳೆದುಕೊಂಡ ಕಂಪೆನಿಯ 326 ಕಾರ್ಮಿಕರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತಿದ್ದ 200ಕ್ಕೂ ಅಧಿಕ ಕಾರ್ಮಿಕರು ಕಂಪೆನಿಯ ಮುಖ್ಯ ಪ್ರವೇಶದ್ವಾರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಮಿಕರ ಹೋರಾಟಕ್ಕೆ ಇಂಟಕ್ ಬೆಂಬಲ ಸೂಚಿಸಿದೆ.

ಮಂಗಳವಾರ ಕಂಪೆನಿ ಮುಚ್ಚುಗಡೆ ವಿಷಯ ತಿಳಿಯುತ್ತಲೇ ಪ್ರತಿಭಟನೆ ಆರಂಭಿಸಿದ್ದ ಕಾರ್ಮಿಕರು ಸಂಜೆ 7ರವರೆಗೆ ಪ್ರತಿಭಟನೆ ನಡೆಸಿದ್ದರು. ಇಂದು ಮತ್ತೆ ಪ್ರತಿಭಟನೆ ಆರಂಭಗೊಂಡಿದ್ದು, ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.

ಕಂಪೆನಿ ಪುನಾರಂಭಿಸಬೇಕು. ಕೆಲಸ ಕಳೆದುಕೊಂಡ ಕಂಪೆನಿಯ 236 ಮತ್ತು ಹೊರಗುತ್ತಿಗೆಯ 200 ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು. ಈಗ ನೀಡುತ್ತಿರುವ ಸಂಬಳವನ್ನು ಹೆಚ್ಚಿಸಬೇಕು. ಕಾರ್ಮಿಕರಿಗೆ ಭದ್ರತೆ ಒದಗಿಸಬೇಕು, ಈಗಾಗಲೇ ಕಂಪೆನಿ ಐವರ ಮೇಲೆ ದಾಖಲಿಸಿರುವ ಕೇಸನ್ನು ಹಿಂಪಡೆಯಬೇಕು ಮುಂತಾದ ಬೇಡಿಕೆಗಳನ್ನು ಧರಣಿನಿರತರು ಕಂಪೆನಿಯ ಮುಂದಿಟ್ಟಿದ್ದಾರೆ.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಇಂಟಕ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್, ದೀಪಕ್ ಎರ್ಮಾಳು, ನವೀನ್‌ಚಂದ್ರ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News