ಹಿಂದೂ ಮಹಾಸಭಾದ ಗ್ವಾಲಿಯರ್ ಕಚೇರಿಯಲ್ಲಿ ಗೋಡ್ಸೆ ಪ್ರತಿಮೆ ಸ್ಥಾಪನೆ

Update: 2017-11-15 16:54 GMT

ಗ್ವಾಲಿಯರ್, ನ. 15: ಅಖಿಲ ಭಾರತೀಯ ಹಿಂದೂ ಸಭಾ ನಗರದಲ್ಲಿರುವ ತನ್ನ ಕಚೇರಿ ಒಳಗಡೆ ಬುಧವಾರ ನಾಥೂರಾಮ್ ಗೋಡ್ಸೆಯ ಪ್ರತಿಮೆ ಪ್ರತಿಷ್ಠಾಪಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ನಗರದಲ್ಲಿ ಮಹಾತ್ಮಾಗಾಂಧಿ ಹಂತಕನ ಸ್ಮರಣಾರ್ಥ ದೇವಾಲಯ ನಿರ್ಮಿಸಲು ಮಹಾಸಭಾ ಜಿಲ್ಲಾಡಳಿತದಲ್ಲಿ ಭೂಮಿ ಕೋರಿ ಮನವಿ ಸಲ್ಲಿಸಿದೆ. ಆದರೆ, ಜಿಲ್ಲಾಡಳಿತ ಮನವಿ ತಿರಸ್ಕರಿಸಿದೆ. ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದಿರುವುದಕ್ಕಾಗಿ 1949 ನವೆಂಬರ್ 15ರಂದು ನಾಥೂರಾಮ್ ಗೋಡ್ಸೆಯನ್ನು ಗಲ್ಲಿಗೇರಿಸಲಾಗಿತ್ತು.

 ಗಾಂಧಿ ಹತ್ಯೆಗೆ ಮುನ್ನ ಒಂದು ವಾರಗಳ ಕಾಲ ಗೋಡ್ಸೆ ನೆಲೆಸಿದ್ದ ಕರ್ಮಸ್ಥಹಲಿಯಲ್ಲಿ ಮಹಾಸಭಾದ ಕಚೇರಿ ಇದೆ. ಗೋಡ್ಸೆ ಬಂದೂಕನ್ನು ಗ್ವಾಲಿಯರ್‌ನಿಂದ ಸಂಗ್ರಹಿಸಿದ್ದರು ಎಂದು ಅಖಿಲ ಭಾರತೀಯ ಹಿಂದೂ ಸಭಾದ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿ ಅವರ ಬಗೆಗಿನ ದೃಷ್ಟಿಕೋನ ಕಾಲದೊಂದಿಗೆ ಬದಲಾಗಿದೆ. ಆದುದರಿಂದ ಎಬಿಎಚ್‌ಎಂನ ದೌಲತ್‌ಗಂಜ್ ಕಚೇರಿಯಲ್ಲಿ ಪ್ರತಿಮೆ ಅಥವಾ ದೇವಾಲಯ ಸ್ಥಾಪಿಸುವ ಬಗ್ಗೆ ಯಾವುದೇ ಆಕ್ಷೇಪ ಇರಬಾರದು ಎಂದು ಭಾರದ್ವಾಜ್ ಹೇಳಿದ್ದಾರೆ.

ಈ ವಿಷಯದ ಕುರಿತು ಪ್ರಶ್ನಿಸಿದಾಗ ಮಧ್ಯಪ್ರದೇಶದ ಗೃಹ ಸಚಿವ ಭೂಪೇಂದ್ರ ಸಿಂಗ್ ಈ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ ಹಾಗೂ ಗ್ವಾಲಿಯರ್‌ನಿಂದ ವರದಿ ಕೋರಲಾಗುವುದು ಎಂದು ಭರವಸೆ ನೀಡಿದ್ದಾರೆ. ಅವರ ಸಂಪುಟ ಸಹೋದ್ಯೋಗಿ, ಆರೋಗ್ಯ ಸಚಿವ ರುಸ್ತುಂ ಸಿಂಗ್ ಕೂಡ ಈ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News