ಹಿಂಡನ್ ವಾಯುನೆಲೆಗೆ ನುಸುಳಲು ಯತ್ನಿಸಿದ ವ್ಯಕ್ತಿಗೆ ಗುಂಡೇಟು
ಹೊಸದಿಲ್ಲಿ, ನ.15: ದೇಶದ ಅತೀ ದೊಡ್ಡ ವಾಯುನೆಲೆಯಾಗಿರುವ ಗಾಝಿಯಾಬಾದ್‌ನ ಹಿಂಡನ್ ವಾಯುನೆಲೆಗೆ ನುಸುಳಲು ಪ್ರಯತ್ನಿಸಿದ ವ್ಯಕ್ತಿಯ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸುಜಿತ್ ಕುಮಾರ್ ಎಂಬಾತ ಭದ್ರತಾ ಸಿಬ್ಬಂದಿ ಹಲವಾರು ಬಾರಿ ಎಚ್ಚರಿಸಿದ ಹೊತಾಗಿಯೂ ವಾಯುನೆಲೆಯ ಆವರಣ ಗೋಡೆಯನ್ನು ಹಾರುವ ಪ್ರಯತ್ನ ನಡೆಸಿದಾಗ ಆತನ ಕಾಲಿಗೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಕೃತ್ಯದ ಹಿಂದೆ ಭಯೋತ್ಪಾದಕರ ಕೈವಾಡ ಇದೆಯೇ ಎಂಬುದನ್ನು ತಿಳಿಯಲು ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಭಾರತೀಯ ವಾಯುಪಡೆಯ ಗುಪ್ತಚರ ವಿಭಾಗದ ಮೂಲಗಳು ತಿಳಿಸಿವೆ.
ತನಗೆ ಹಸಿವಾಗಿತ್ತು. ಆವರಣ ಗೋಡೆಯ ಮೇಲೇರಿ ದಣಿವಾರಿಸಿಕೊಳ್ಳಲು ತಾನು ಇಚ್ಚಿಸಿದ್ದೆ ಎಂದು ಕುಮಾರ್ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿಮಾಡಿದೆ. ಆದರೆ ಈ ವರದಿಯನ್ನು ನಿರಾಕರಿಸಿರುವ ತನಿಖಾಧಿಕಾರಿಗಳು, ಸೌದಿ ಅರೆಬಿಯಾದಲ್ಲಿ ಉತ್ತಮ ಉದ್ಯೋಗ ಸಿಗುತ್ತದೆ ಎಂದು ಯಾರೋ ತನಗೆ ಹೇಳಿದ್ದರು. ಅದರಂತೆ ವಾಯುನೆಲೆಗೆ ನುಗ್ಗಿ, ಅಲ್ಲಿರುವ ಯಾವುದಾದರೊಂದು ವಿಮಾನದಲ್ಲಿ ಸೌದಿಗೆ ತೆರಳಲು ಬಯಸಿದ್ದೆ ಎಂದು ಆತ ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ವಾಯುನೆಲೆಯ ಬಳಿ ಮಂಗಳವಾರ ರಾತ್ರಿ ಸುಮಾರು 10:30ರ ವೇಳೆ ಸುಜಿತ್ ಮೊದಲು ಕಾಣಿಸಿಕೊಂಡಿದ್ದಾನೆ. ವಾಯುನೆಲೆಯ ಹೊರಗೆ ನಿಲ್ಲಿಸಲಾಗಿದ್ದ ಜೆಟ್ ಯುದ್ಧವಿಮಾನವೊಂದನ್ನು ಕೆಲ ಹೊತ್ತು ವೀಕ್ಷಿಸಿದ ಬಳಿಕ ಆತ ಗೇಟ್ ನಂ.1ರ ಮೂಲಕ ವಾಯುನೆಲೆಯ ಒಳಪ್ರವೇಶಿಸಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಗಮನಿಸಿ ಎಚ್ಚರಿಸಿದರೂ ಈತ ಕೇಳಲಿಲ್ಲ. ಈ ರೀತಿಯ ಕೃತ್ಯ ಕಂಡುಬಂದಲ್ಲಿ ‘ಕಂಡಲ್ಲಿ ಗುಂಡು ಹಾರಿಸುವ’ ಆದೇಶ ಇರುವುದರಿಂದ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಸುಜಿತ್ ಕುಮಾರನ ಮೊಬೈಲ್ ನಂಬರ್‌ನ ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರ ತಂಡವೊಂದನ್ನು ಸ್ಥಳಕ್ಕೆ ರವಾನಿಸಲಾಗಿದೆ. ಅಲ್ಲದೆ ವಾಯುನೆಲೆಯ ಸುತ್ತ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.