ಎಸ್‌ಸಿ/ಎಸ್‌ಟಿ ಭಡ್ತಿ ಕೋಟಾ: ತೀರ್ಪಿನ ಅವಲೋಕನಕ್ಕೆ ಸುಪ್ರೀಂ ನಿರ್ಧಾರ
ಹೊಸದಿಲ್ಲಿ, ನ.15: ಸರಕಾರಿ ಉದ್ಯೋಗದಲ್ಲಿ ಬಡ್ತಿಯ ಸಂದರ್ಭ ಎಸ್‌ಸಿ/ಎಸ್‌ಟಿ ವರ್ಗದವರಿಗೆ ಮೀಸಲಾತಿ ನೀಡಲು ಕೆನೆಪದರ ರೂಪಿಸಲು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ತಾನು 11 ವರ್ಷದ ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಅವಲೋಕನ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
2006ರಲ್ಲಿ ಎಂ.ನಾಗರಾಜ್ ಮತ್ತು ಇತರರು - ಭಾರತ ಸರಕಾರ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆಯೇ ಎಂಬುದನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠ ಪರಿಶೀಲಿಸಲಿದೆ ಎಂದು ಉಚ್ಛನ್ಯಾಯಾಲಯ ತಿಳಿಸಿದೆ. ತೀರ್ಪನ್ನು ಸರಿಪಡಿಸುವ ಕಾರ್ಯವನ್ನು ಈ ಪೀಠ ಮಾಡುವುದಿಲ್ಲ ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಹಾಗೂ ನ್ಯಾಯಾಧೀಶರಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಸ್ಪಷ್ಟಪಡಿಸಿದರು.
ಸರಕಾರಿ ಉದ್ಯೋಗದಲ್ಲಿ ಎಸ್‌ಸಿ/ಎಸ್‌ಪಿ ಪಂಗಡದವರಿಗೆ ಬಡ್ತಿಯ ಸಂದರ್ಭ ಕೆನೆಪದರ ಪರಿಕಲ್ಪನೆ ಅನ್ವಯವಾಗದು ಎಂದು ಎಂ.ನಾಗರಾಜ್ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ತಿಳಿಸಲಾಗಿದೆ. ಕೆನೆಪದರ ವಿಷಯಕ್ಕೆ ಸಂಬಂಧಿಸಿದ ಈ ಹಿಂದಿನ 1992ರ ಮಂಡಲ್ ಕಮಿಷನ್ ವರದಿ ಹಾಗೂ 2005ರ ಇ.ವಿ.ಚಿನ್ನಯ್ಯ - ಆಂಧ್ರಪ್ರದೇಶ ರಾಜ್ಯ ಸರಕಾರ ಪ್ರಕರಣದಲ್ಲೂ ಇದೇ ರೀತಿಯ ತೀರ್ಪು ನೀಡಲಾಗಿದೆ.
ರಾಜ್ಯ ಸರಕಾರಗಳು ಬಡ್ತಿಯ ಸಂದರ್ಭ ಎಸ್‌ಸಿ/ಎಸ್‌ಟಿ ಮೀಸಲಾತಿಗೆ ಬದ್ಧರಾಗಬೇಕಿಲ್ಲ. ಆದರೂ ರಾಜ್ಯಗಳು ಬಯಸಿದರೆ ಸ್ವಂತ ವಿವೇಚನೆ ಬಳಸಿಕೊಂಡು ಎಸ್‌ಸಿ/ ಎಸ್‌ಟಿ ಪಂಗಡಗಳ ಹಿಂದುಳಿಯುವಿಕೆ ಕುರಿತ ಅಂಕಿ ಅಂಶ ಸಂಗ್ರಹಿಸಿ , ಅಗತ್ಯ ಎಂದು ಕಂಡುಬಂದರೆ, ವಿಧಿ 335ನ್ನು ಪಾಲಿಸಿ ಇದಕ್ಕೆ ಅವಕಾಶ ಮಾಡಿಕೊಡಬಹುದು ಎಂದು ನಾಗರಾಜ್ ಪ್ರಕರಣದ ತೀರ್ಪಿನಲ್ಲಿ ಐವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ತಿಳಿಸಿತ್ತು.
ನ್ಯಾಯಬದ್ಧ ಕಾರಣಗಳಿದ್ದರೂ, ಮೀಸಲಾತಿ ಮಿತಿಯಾದ ಶೇ.50ನ್ನು ಮಿರದಂತೆ ಅಥವಾ ಕೆನೆಪದರ ಪರಿಕಲ್ಪನೆ ನಾಶಗೊಳಿಸಲು ಅವಕಾಶ ನೀಡದೆ ಬಡ್ತಿಯಲ್ಲಿ ಮೀಸಲಾತಿ ನೀಡಬಹುದಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿತ್ತು.