ಕೇಂದ್ರ ಹೆದ್ದಾರಿ ಸಚಿವಾಲಯದ ವೆಬ್‌ಸೈಟ್ ಗೆ ಸಿಗದ ಭಾರತೀಯ ರಸ್ತೆಗಳು..!

Update: 2017-11-16 11:14 GMT

ಕೇಂದ್ರ ಸರಕಾರದ ಜಾಲತಾಣವೊಂದು ಮತ್ತೊಮ್ಮೆ ಮೂರ್ಖತನವನ್ನು ಪ್ರದರ್ಶಿ ಸಿದೆ. ಭಾರತೀಯ ಗಡಿಯಲ್ಲಿ ವಿದ್ಯುದೀಕರಣವನ್ನು ತೋರಿಸಲು ಸ್ಪೇನ್-ಮೊರೊಕ್ಕೋ ಗಡಿಯ ಚಿತ್ರವನ್ನು ತೋರಿಸಿದ್ದ ಬೆನ್ನಲ್ಲೇ ಇನ್ನೊಂದು ಯಡವಟ್ಟು ಬೆಳಕಿಗೆ ಬಂದಿದೆ. ಭಾರತವು 54 ಲಕ್ಷ ಕಿ.ಮೀ.ಉದ್ದದ ರಸ್ತೆ ಜಾಲವನ್ನು ಹೊಂದಿದ್ದರೂ ತನ್ನ ‘ಪರಿವಾಹನ ವೆಬ್‌ಸೈಟ್’ನಲ್ಲಿ ಬಳಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಒಂದೂ ಭಾರತೀಯ ರಸ್ತೆ ಸಿಕ್ಕಿಲ್ಲ !

ಸಚಿವಾಲಯದ ವೆಬ್‌ಸೈಟ್‌ನಲ್ಲಿ ಬಳಸಲಾಗಿರುವ ಚಿತ್ರವು ಕೆನಡಾದ ಟೊರೆಂಟೊ ದಲ್ಲಿಯ ಗಾರ್ಡಿನರ್ ಎಕ್ಸ್‌ಪ್ರೆಸ್‌ವೇದ್ದಾಗಿದೆ ಎಂದು www.altnews.in ವರದಿ ಮಾಡಿದೆ.

ರಿವರ್ಸ್ ಇಮೇಜ್ ಸರ್ಚ್ ಈ ಚಿತ್ರ ವನ್ನು ತೋರಿಸುವುದಿಲ್ಲವಾದರೂ, ಕೆನಡಾದ ಈ ಎಕ್ಸ್‌ಪ್ರೆಸ್‌ವೇದ ಪರಿಚಯವಿರುವ ಬಳಕೆದಾರರು ಅದರ ಚಿತ್ರವನ್ನು ಭಾರತ ಸರಕಾರದ ವೆಬ್‌ಸೈಟ್‌ನಲ್ಲಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ಬಳಕೆದಾರರು ಶೇರ್ ಮಾಡಿಕೊಂಡಿರುವ ಚಿತ್ರವು ಅದೇ ರೀತಿಯ ಹಿನ್ನೆಲೆಯಲ್ಲಿ ಗಾರ್ಡಿನರ್ ಹೆದ್ದಾರಿ ಚಿತ್ರದಂತೆಯೇ ಕಾಣುತ್ತಿದೆಯಾದರೂ ಅದು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಬಳಕೆಯಾಗಿರುವ ಚಿತ್ರದೊಂದಿಗೆ ಹೋಲಿಕೆಯಾಗು ವುದಿಲ್ಲ. ಗೂಗಲ್ ಮ್ಯಾಪ್ಸ್‌ನ ಸ್ಟ್ರೀಟ್ ವ್ಯೆ ಫೀಚರ್‌ನ್ನು ಬಳಸಿ ಪರಿಶೀಲಿಸಿದಾಗ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಬಳಸಿರುವ ಚಿತ್ರವು ನಿಜಕ್ಕೂ ಗಾರ್ಡಿನರ್ ಎಕ್ಸ್‌ಪ್ರೆಸ್‌ವೇದ್ದು ಎನ್ನುವುದು ಖಚಿತಪಟ್ಟಿದೆ ಎಂದು ಈ ವಿಷಯವನ್ನು ಬೆಳಕಿಗೆ ತಂದಿರುವ ಸುದ್ದಿತಾಣ ಆಲ್ಟ್ ನ್ಯೂಸ್ ತಿಳಿಸಿದೆ. ಅಲ್ಲದೆ ಗಾರ್ಡಿನರ್ ಎಕ್ಸ್‌ಪ್ರೆಸ್‌ವೇ ಕುರಿತ ಯು ಟ್ಯೂಬ್ ವಿಡಿಯೋ ಕೂಡ ಇದನ್ನು ದೃಢಪಡಿಸಿದೆ ಎಂದಿದೆ.

ಈ ಸುಳಿವಿನಿಂದ ಉತ್ತೇಜಿತಗೊಂಡು ಇನ್ನಷ್ಟು ಕೆದಕಿದಾಗ ಸಚಿವಾಲಯದ ವೆಬ್‌ಸೈಟ್ ಇಂತಹುದೇ ಇನ್ನಷ್ಟು ಚಿತ್ರಗಳನ್ನು ಬಳಸಿಕೊಂಡಿರುವುದು ಬಹಿರಂಗ ಗೊಂಡಿದೆ. ಗಾರ್ಡಿನರ್‌ಗಿಂತ ಮೇಲಿರುವ ಚಿತ್ರವು ಅಮೆರಿಕದ ನೆವಾಡಾದಲ್ಲಿನ ಕೈಲ್ ಕ್ಯಾನಿಯನ್ ರಸ್ತೆಯ ಚಿತ್ರವೆನ್ನುವುದು ದೃಢಪಟ್ಟಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ನಿಕೋಲಾ ಎಂಬಾತ 2011, ಜೂ.23ರಂದು ಈ ಚಿತ್ರವನ್ನು ತೆಗೆದಿದ್ದು, ಬಳಿಕ ಅದನ್ನು ತನ್ನ ಫ್ಲಿಕ್ರ್ ಖಾತೆಗೆ ಪೋಸ್ಟ್ ಮಾಡಿದ್ದ.

ನ್ಯಾಷನಲ್ ಇನ್ಫಾರ್ಮಾಟಿಕ್ಸ್ ಸೆಂಟರ್(ಎನ್‌ಐಸಿ) ಪರಿವಾಹನ ವೆಬ್‌ಸೈಟ್‌ನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಗೊಳಿಸಿರುವ ಜೊತೆಗೆ ಅದನ್ನು ನಿರ್ವಹಿಸುತ್ತಿದೆ. ಭಾರತ ಸರಕಾರದ ಸಂಸ್ಥೆಯಾಗಿರುವ ಎನ್‌ಐಸಿ ಇ-ಆಡಳಿತ ಆ್ಯಪ್‌ಗಳ ‘ಪ್ರಮುಖ ಸೃಷ್ಟಿಕರ್ತ’ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತದೆ. ಭಾರತವನ್ನು ಪ್ರತಿನಿಧಿಸಲು ಇತರ ದೇಶಗಳ ಚಿತ್ರಗಳನ್ನು ಬಳಸಿಕೊಳ್ಳದಂತೆ ಈ ಎನ್‌ಐಸಿಗೆ ಸೂಚಿಸುವುದು ಖಂಡಿತ ವಾಗಿಯೂ ಅಧಿಕ ಪ್ರಸಂಗವೆನ್ನಿಸುವುದಿಲ್ಲ.

ಸರಕಾರಿ ವೆಬ್‌ಸೈಟ್‌ಗಳು ಮತ್ತು ಪ್ರಕಟಣೆಗಳು ಭಾರತದಲ್ಲಿ ಪ್ರಗತಿಯನ್ನು ಬಿಂಬಿಸಲು ಇತರ ದೇಶಗಳ ಚಿತ್ರಗಳನ್ನು ಬಳಸಿಕೊಂಡ ಇಂತಹ ಹಲವಾರು ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿವೆ. ದೇಶದ ಪ್ರಗತಿಗೆ ಸಾಕ್ಷಿಯಾಗಿ ನಮ್ಮಲ್ಲಿ ಇಷ್ಟೆಲ್ಲ ಸಾಧನೆಗಳಿರುವಾಗ ಭಾರತದ್ದೆಂದು ತೋರಿಸಲು ಇತರ ದೇಶಗಳ ಚಿತ್ರಗಳನ್ನು ಬಳಸುವ ಅಗತ್ಯವಾದರೂ ಏನಿದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News