500 ವರ್ಷ ಹಳೆಯ ಈ ತೈಲ ಕಲಾಕೃತಿ ಹರಾಜಾದದ್ದು ಎಷ್ಟು ಸಾವಿರ ಕೋಟಿ ರೂ.ಗೆ ಗೊತ್ತೇ?
ನ್ಯೂಯಾರ್ಕ್, ನ.16: 500 ವರ್ಷಗಳಷ್ಟು ಹಳೆಯದಾದ, ಜಗದ್ವಿಖ್ಯಾತ ಕಲಾವಿದ ಲಿಯೊನಾರ್ಡೊ ಡಾ ವಿನ್ಸಿ ರಚಿಸಿದ ತೈಲ ಕಲಾಕೃತಿ `ಸಾಲ್ವತೊರ್ ಮುಂಡಿ' ( ಜಗತ್ತಿನ ರಕ್ಷಕ) ನ್ಯೂಯಾರ್ಕ್ ನಗರದಲ್ಲಿ ಹರಾಜು ಪ್ರಕ್ರಿಯೆಯಲ್ಲಿ 450 ಮಿಲಿಯನ್ ಅಮೆರಿಕನ್ ಡಾಲರ್ ಗೆ ಹರಾಜಾಗಿದೆ.
ಈ 66 ಸೆಂ.ಮೀ ಉದ್ದದ ಕಲಾಕೃತಿ ಕ್ರಿಸ್ತಶಕ 1500ರಲ್ಲಿ ರಚಿಸಲಾಗಿದೆ ಎಂದು ಹೇಳಲಾಗಿದ್ದು, ನೀಲಿ ನಿಲುವಂಗಿ ಧರಿಸಿರುವ ಏಸು ತನ್ನ ಬಲ ಕೈಯ್ಯನ್ನು ಆಶೀರ್ವದಿಸುವ ರೀತಿಯಲ್ಲಿ ಮೇಲೆತ್ತಿದ್ದರೆ ಇನ್ನೊಂದು ಕೈಯ್ಯಲ್ಲಿ ಸ್ಫಟಿಕದ ಮಂಡಲವಿದೆ. ಲಿಯೋನಾರ್ಡೊ ಡಾ ವಿನ್ಸಿಯ ಪ್ರಸಿದ್ಧ ಕಲಾಕೃತಿಗಳಲ್ಲಿ ಇದೂ ಒಂದಾಗಿದ್ದು, 450 ಮಿಲಿಯನ್ ಡಾಲರ್ ಅಂದರೆ 2,900 ಕೋಟಿ ರೂ.ಗಳಿಗೆ ಮಾರಾಟವಾಗಿದೆ.
ಲಿಯೊನಾರ್ಡೋ ಡಾ ವಿನ್ಸಿಯಂತಹ ಮೇರು ಕಲಾವಿದನ ಕಲಾಕೃತಿಯೊಂದನ್ನು ಆಧುನಿಕ ಕಲಾಕೃತಿಗಳ ಹರಾಜು ಕೇಂದ್ರದಲ್ಲಿ ಏಕೆ ಹರಾಜು ಹಾಕಲಾಗಿದೆ ಎಂದು ಕೆಲವರು ಪ್ರಶ್ನಿಸುತ್ತಿದ್ದು, ಈ ಕಲಾಕೃತಿಯ ಶೇ.90ರಷ್ಟು ಭಾಗವನ್ನು ಕಳೆದ 50 ವರ್ಷಗಳಲ್ಲಿ ರಚಿಸಲಾಗಿದೆ ಎಂದು ವಲ್ಚರ್ ಪತ್ರಿಕೆಯ ಜೆರ್ರಿ ಸಾಲ್ಟ್ಸ್ ಎಂಬವರು ಹೇಳಿದ್ದಾರೆ. ಕಲಾಕೃತಿಯನ್ನು ಹಲವೆಡೆ ತಿದ್ದಲಾಗಿದ್ದು ಇದನ್ನು ಮೂಲ ಕಲಾಕೃತಿಯಂತೆ ಬಿಂಬಿಸುವ ಯತ್ನಗಳು ನಡೆದಿವೆ ಎಂದೂ ಹೇಳಲಾಗುತ್ತದೆ.
ನಕಲಿ ಎಂಬ ಸಂಶಯ?: ಸದ್ಯ ಲಭ್ಯವಿರುವ ಲಿಯೊನಾರ್ಡೊ ಕಲಾಕೃತಿಗಳಲ್ಲಿ ಯಾವುದರಲ್ಲೂ ವ್ಯಕ್ತಿಯೊಬ್ಬ ಈ ನಿರ್ದಿಷ್ಟ ಕಲಾಕೃತಿಯಲ್ಲಿದ್ದಂತೆ ನೇರವಾಗಿ ನೋಡುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಏಸು ಕ್ರಿಸ್ತ ಸ್ಫಟಿಕ ಮಂಡಲ ಹಿಡಿದಂತೆ ತೋರಿಸುವ ಈ ಕಲಾಕೃತಿ ನಕಲಿಯಾಗಿರಬಹುದೇನೋ ಎಂದು ಕೆಲವರು ಈಗಾಗಲೇ ಸಂಶಯ ವ್ಯಕ್ತಪಡಿಸಲಾರಂಭಿಸಿದ್ದಾರೆ. ಕ್ರಿಸ್ಟೀಸ್ ಆಕ್ಷನ್ ಹೌಸ್ ಹರಾಜು ಹಾಕಿದ ಈ ಕಲಾಕೃತಿ ಡಾ ವಿನ್ಸಿಯ ಉಳಿದಿರಬಹುದಾದ 20ಕ್ಕೂ ಕಡಿಮೆ ಕಲಾಕೃತಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಆದರೆ ಹೆಚ್ಚಿನವರು ಇದು ಡಾ ವಿನ್ಸಿಯ ಮೂಲ ಕಲಾಕೃತಿಯೆಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಕ್ರಿಸ್ಟೀಸ್ ಆಕ್ಷನ್ ಹೌಸ್ ಹೇಳುತ್ತಿದೆ.