ಭಯೋತ್ಪಾದಕ ಗುಂಪು ಸೇರಿದನೇ ಕಾಶ್ಮೀರದ ಫುಟ್‌ಬಾಲ್ ಆಟಗಾರ ?
ಶ್ರೀನಗರ, ನ.16: ಕಳೆದೊಂದು ವರ್ಷದಿಂದ ಜಮ್ಮುಕಾಶ್ಮೀರದ 100ಕ್ಕೂ ಹೆಚ್ಚು ಸ್ಥಳೀಯ ವ್ಯಕ್ತಿಗಳು ಭಯೋತ್ಪಾದಕರ ಗುಂಪನ್ನು ಸೇರಿಕೊಂಡಿದ್ದಾರೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿದ್ದು, ಇದೀಗ ಈ ಪಟ್ಟಿಗೆ ಖ್ಯಾತ ಫುಟ್‌ಬಾಲ್ ಆಟಗಾರನಾಗಿದ್ದ ಜಮ್ಮು ಕಾಶ್ಮೀರದ 20ರ ಹರೆಯದ ಮಜೀದ್ ಖಾನ್ ಎಂಬಾತ ಸೇರ್ಪಡೆಗೊಂಡಿದ್ದಾನೆ ಎನ್ನಲಾಗಿದೆ.
ಕಳೆದ ಗುರುವಾರ ಮಜೀದ್‌ಖಾನ್ ಏಕಾಏಕಿ ಕಣ್ಮರೆಯಾಗಿದ್ದ. ಕೆಲ ದಿನದ ಬಳಿಕ ವಾಟ್ಸಾಪ್‌ನಲ್ಲಿ ಮಜೀದ್‌ಖಾನ್ ರೈಫಲ್ ಹಿಡಿದು ನಿಂತಿರುವ ಚಿತ್ರ ಪ್ರಸಾರವಾಗಿದ್ದು ಆತ ಭಯೋತ್ಪಾದಕ ಗುಂಪು ಸೇರಿರಬಹುದು ಎಂಬ ಶಂಕೆಯನ್ನು ದೃಢಪಡಿಸಿದೆ.
ಶಾಲಾ ದಿನದಿಂದಲೇ ಫುಟ್‌ಬಾಲ್ ಆಟದತ್ತ ಆಕರ್ಷಿತನಾಗಿದ್ದ ಮಜೀದ್‌ಖಾನ್ ಮನೆಯ ಕಪಾಟಿನ ತುಂಬಾ ಟ್ರೋಫಿಗಳೇ ತುಂಬಿವೆ. ದಕ್ಷಿಣ ಕಾಶ್ಮೀರದಲ್ಲಿ ಪೊಲೀಸರು ನಡೆಸಿದ ಫುಟ್‌ಬಾಲ್ ಟೂರ್ನಿಯಲ್ಲಿ ಉತ್ತಮ ಆಟಗಾರನೆಂಬ ಪುರಸ್ಕಾರದ ಜೊತೆ ದೊರೆತ ಟ್ರೋಫಿಯೂ ಇದರಲ್ಲಿ ಸೇರಿದೆ.
ಮಗ ನಾಪತ್ತೆಯಾಗಿ ವಾರ ಕಳೆದರೂ ಮಜೀದ್ ಖಾನ್ ನ 50ರ ಹರೆಯದ ತಾಯಿ ಆಶಿಯಾ ಬೇಗಂ ಉಪಾಹಾರ ಸೇವಿಸದೆ ತನ್ನ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಮನೆಗೆ ಭೇಟಿ ನೀಡುವ ಪ್ರತಿಯೊಬ್ಬರಲ್ಲೂ ತನ್ನ ಮಗನನ್ನು ರಕ್ಷಿಸಿ ಎಂದು ವಿನಂತಿ ಮಾಡಿಕೊಳ್ಳುತ್ತಿದ್ದಾರೆ. 'ಮರಳಿ ಬಾ ಮಗನೇ' ಎಂದು ಬೇಗಂ ಕಣ್ಣೀರಿಡುತ್ತಾ ನಿವೇದನೆ ಮಾಡಿಕೊಳ್ಳುತ್ತಿರುವ ವೀಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿಬಿಟ್ಟಿದೆ. ಸಾವಿರಾರು ಮಂದಿ ಮಜೀದ್‌ಖಾನ್‌ಗೆ ಮರಳಿ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಮಧ್ಯೆ, ಮಂಗಳವಾರ ಜಮ್ಮುವಿನ ಕುಲ್‌ಗಾಂವ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಜೀದ್‌ಖಾನ್ ಸೇರಿದಂತೆ ಮೂವರು ಸ್ಥಳೀಯ ಭಯೋತ್ಪಾದಕರನ್ನು ಪೊಲೀಸರು ಸೆರೆಹಿಡಿದಿದ್ದಾರೆ ಎಂಬ ಸುದ್ದಿ ಹಬ್ಬಿದ್ದು ಇದನ್ನು ಕೇಳಿ 59ರ ಹರೆಯದ ಆತನ ತಂದೆ ಇರ್ಷಾದ್ ಅಹ್ಮದ್ ಖಾನ್‌ಗೆ ಲಘು ಹೃದಯಾಘಾತವಾಗಿದೆ. ಮಜೀದ್ ಖಂಡಿತಾ ಮರಳಿ ಬರುತ್ತಾನೆ. ಆತ ನನಗೆ ಕೇವಲ ಮಗನಾಗಿರಲಿಲ್ಲ, ನಾವಿಬ್ಬರೂ ಉತ್ತಮ ಸ್ನೇಹಿತರಂತಿದ್ದೆವು . ಆತ ಹೀಗೇಕೆ ಮಾಡಿದ ಎಂದೇ ಅರ್ಥವಾಗುತ್ತಿಲ್ಲ ಎಂದು ಇರ್ಷಾದ್ ಹೇಳುತ್ತಾರೆ.
ಭಯೋತ್ಪಾದಕ ಗುಂಪು ತ್ಯಜಿಸಲು ಸ್ಥಳೀಯ ಯುವಕರು ಇಚ್ಛಿಸಿದರೆ ಅವರಿಗೆ ಸೂಕ್ತ ಸಹಾಯ ನೀಡಿ ಪುನರ್ವಸತಿ ವ್ಯವಸ್ಥೆ ಮಾಡಲಾಗುವುದು. ಇದೇ ರೀತಿ ಮಜೀದ್‌ಖಾನ್ ತಮ್ಮ ಕುಟುಂಬದವರನ್ನು ಮರಳಿ ಸೇರುವಂತಾಗಲು ಸರ್ವಪ್ರಯತ್ನ ನಡೆಸಲಾಗುವುದು. ಶಸ್ತ್ರ ತ್ಯಜಿಸಿ, ಮುಖ್ಯವಾಹಿನಿಗೆ ಮರಳಿ ಬನ್ನಿ ಎಂಬ ಸಂದೇಶವನ್ನು ಮಜೀದ್‌ಖಾನ್ ಸೇರಿದಂತೆ ಎಲ್ಲಾ ಸ್ಥಳೀಯ ಯುವಕರಿಗೂ ನೀಡುತ್ತೇವೆ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿ ಝುಲ್ಫಿಕರ್ ಹಸನ್ ಹೇಳಿದ್ದಾರೆ.