×
Ad

ಚೀನಾ ಓಪನ್ ಸೂಪರ್ ಸರಣಿ: ಸಿಂಧು ಕ್ವಾರ್ಟರ್‌ಫೈನಲ್‌ಗೆ

Update: 2017-11-16 19:56 IST

ಶಾಂಘೈ, ನ.16: ದ್ವಿತೀಯ ಶ್ರೇಯಾಂಕದ ಪಿ.ವಿ.ಸಿಂಧು ಚೀನಾ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಶಟ್ಲರ್ ಆಗಿದ್ದಾರೆ. ಕಳೆದ ವಾರ ನಾಗ್ಪುರದಲ್ಲಿ ನಡೆದಿದ್ದ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದ ಎಚ್.ಎಸ್.ಪ್ರಣಯ್ ಹಾಗೂ ಸೈನಾ ನೆಹ್ವಾಲ್ ಎರಡನೆ ಸುತ್ತಿನಲ್ಲಿ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.2ನೆ ಆಟಗಾರ್ತಿ ಸಿಂಧು ಚೀನಾದ 17ರ ಹರೆಯದ ಆಟಗಾರ್ತಿ ಹ್ಯಾನ್ ಯು ಅವರನ್ನು 21-15, 21-13 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

ಈ ಇಬ್ಬರು ಆಟಗಾರ್ತಿಯರು ಮೊದಲ ಬಾರಿ ಮುಖಾಮುಖಿಯಾಗಿದ್ದಾರೆ. 105ನೆ ರ್ಯಾಂಕಿನ ಹ್ಯಾನ್ ಆರಂಭದಲ್ಲಿ ಮೇಲುಗೈ ಸಾಧಿಸುವ ಸೂಚನೆ ನೀಡಿದರು. ಆದರೆ, ಹಿರಿಯ ಆಟಗಾರ್ತಿ ಸಿಂಧು ಚೀನಾ ಆಟಗಾರ್ತಿಗೆ ತಿರುಗೇಟು ನೀಡಲು ಸಫಲರಾಗಿದ್ದಾರೆ. ಮೊದಲ ಗೇಮ್‌ನ್ನು 21-15 ರಿಂದ ಗೆದ್ದುಕೊಂಡಿರುವ ಸಿಂಧು ಎರಡನೆ ಗೇಮ್‌ನ್ನು 21-13 ಅಂತರದಿಂದ ವಶಪಡಿಸಿಕೊಂಡಿದ್ದಾರೆ.

ವಿಶ್ವದ ನಂ.11ನೆ ಆಟಗಾರ ಪ್ರಣಯ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 53ನೆ ರ್ಯಾಂಕಿನ ಚೀನಾದ ಚೆಯುಕ್ ಯಿಯು ವಿರುದ್ಧ 21-19, 21-17 ನೇರ ಗೇಮ್‌ಗಳಿಂದ ಸೋತಿದ್ದಾರೆ.

 ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 11ನೆ ರ್ಯಾಂಕಿನ ಸೈನಾ ಜಪಾನ್‌ನ ವಿಶ್ವದ ನಂ.4ನೆ ಆಟಗಾರ್ತಿ ಅಕಾನ್ ಯಮಗುಚಿ ವಿರುದ್ಧ 21-18, 21-11 ಅಂತರದಿಂದ ಶರಣಾಗಿದ್ದಾರೆ. ಸೈನಾ ಈ ವರ್ಷ ಜಪಾನ್ ಆಟಗಾರ್ತಿ ವಿರುದ್ಧ ನಾಲ್ಕನೆ ಬಾರಿ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News