ನಾಪತ್ತೆಯಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ
ಲಕ್ನೋ, ನ.16: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಲಕ್ನೋದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ)ನ ವಿದ್ಯಾರ್ಥಿಯ ಮೃತದೇಹ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದ್ವಿತೀಯ ವರ್ಷದ ಎಂಬಿಎ ವಿದ್ಯಾರ್ಥಿ, ಕೋಲ್ಕತಾ ಮೂಲದ ಸೋಹಮ್ ಮುಖರ್ಜಿ ಎಂಬಾತ ಎರಡು ದಿನದ ಹಿಂದೆ ತನ್ನ ಸ್ನೇಹಿತರೊಂದಿಗೆ ಕಾಲ ಕಳೆದ ಬಳಿಕ ನಾಪತ್ತೆಯಾಗಿದ್ದ. ಗುವಾಹಟಿಯ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಸೋಹಮ್ ಬಳಿಕ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಕೆಲ ವರ್ಷ ಕೆಲಸ ಮಾಡಿದ್ದು ಕಳೆದ ವರ್ಷ ಲಕ್ನೋ ಐಐಎಂನಲ್ಲಿ ಎಂಬಿಎಗೆ ಸೇರ್ಪಡೆಯಾಗಿ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದ.
ಸೋಮವಾರದಿಂದ ಏಕಾಏಕಿ ನಾಪತ್ತೆಯಾದ ಸೋಹಮ್ ಯಾರ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಬುಧವಾರ ಆತನ ಹಾಸ್ಟೆಲ್ ಕೋಣೆಯನ್ನು ಒಳಗಿನಿಂದ ಲಾಕ್ ಮಾಡಿರುವುದನ್ನು ಸ್ನೇಹಿತರು ಗಮನಿಸಿ ಕೋಣೆಯ ಬಾಗಿಲು ಮುರಿದು ಒಳಗೆ ನುಗ್ಗಿದಾಗ ಕೋಣೆಯ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ . ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಆತನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನನ್ನು ವಶಕ್ಕೆ ಪಡೆಯಲಾಗಿದ್ದು ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ . ವೈಯಕ್ತಿಕ ಸಮಸ್ಯೆಯ ಕಾರಣ ಖಿನ್ನತೆಗೆ ಒಳಗಾಗಿದ್ದ ಸೋಹಂ ಕಳೆದ ವಾರವಿಡೀ ತರಗತಿಗೆ ಹಾಜರಾಗಿರಲಿಲ್ಲ ಎಂಬುದು ಪ್ರಾರಂಭಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸೋಹಂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಎಂದು ಐಐಎಂ ಆಡಳಿತಮಂಡಳಿ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದೆ.