“ರಫೇಲ್ ಒಪ್ಪಂದ, ಶಾ ಪುತ್ರನ ಅವ್ಯವಹಾರದ ಬಗ್ಗೆ ಮೋದಿಯನ್ನೇಕೆ ಪ್ರಶ್ನಿಸುತ್ತಿಲ್ಲ”
ಹೊಸದಿಲ್ಲಿ, ನ.16: “ನೀವು ನನಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತೀರಿ ಹಾಗೂ ಅವುಗಳಿಗೆ ನಾನು ಸೂಕ್ತ ಉತ್ತರ ನೀಡುತ್ತಾ ಬಂದಿದ್ದೇನೆ. ಆದರೆ ನೀವೇಕೆ ರಫೇಲ್ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿಯನ್ನು ಪ್ರಶ್ನಿಸುತ್ತಿಲ್ಲ. ಓರ್ವ ಉದ್ಯಮಿಯ ಅನುಕೂಲಕ್ಕಾಗಿ ಇಡೀ ವ್ಯವಹಾರವನ್ನೇ ಮೋದಿ ಬದಲಾಯಿಸಿದ್ದಾರೆ. ಅಲ್ಲದೆ, ಅಮಿತ್ ಶಾ ಪುತ್ರನ ಬಗ್ಗೆ ಯಾಕೆ ಮೋದಿಯನ್ನು ಪ್ರಶ್ನಿಸುತ್ತಿಲ್ಲ” ಎಂದು ರಾಹುಲ್ ಗಾಂಧಿ ಮಾಧ್ಯಮದವರನ್ನು ಪ್ರಶ್ನಿಸಿದ ಘಟನೆ ನಡೆದಿದೆ.
ಅಸಂಘಟಿತ ವಲಯದ ಕಾರ್ಮಿಕರ ಅಖಿಲ ಭಾರತ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ ರಾಹುಲ್ ಈ ಪ್ರಶ್ನೆ ಕೇಳಿದ್ದಾರೆ. ಫ್ರಾನ್ಸಿನ ದಸ್ಸಲ್ಟ್ ಏವಿಯೇಷನ್ ಸಂಸ್ಥೆಯಿಂದ 36 ರಫೇಲ್ ಎಂಎಂಆರ್‌ಸಿಎ ಫೈಟರ್ ವಿಮಾನಗಳ ಖರೀದಿಗೆ 7.8 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿಹಾಕಲಾಗಿದೆ. ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ವಿಮಾನ ಖರೀದಿಗೆ ಟೆಂಡರ್ ಕರೆಯಲಾಗಿತ್ತು. ಆದರೆ ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕ ದರ ಪಾವತಿಸಿ ವಿಮಾನ ಖರೀದಿಸಲು ಮುಂದಾಗಿದೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ.
ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣ ಸೇರಿದಂತೆ ಪ್ರಮುಖ ಹಗರಣಗಳಲ್ಲಿ ಸಿಲುಕಿರುವ ಕಾರಣ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ.