ಸಿನೆಮಾ ನಿರ್ಮಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಸಲ್ಲದು: ಸುಪ್ರೀಂ

Update: 2017-11-16 15:06 GMT

ಹೊಸದಿಲ್ಲಿ, ನ.16: ಸಿನೆಮ ನಿರ್ಮಾಪಕರ ವಾಕ್ ಸ್ವಾತಂತ್ರ್ಯ ಮತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಯಾವುದೇ ನಿರ್ಬಂಧ ಇರಕೂಡದು. ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಗೊಳಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ.

ಸಂಜಯ್ ಲೀಲಾ ಭನ್ಸಾಲಿಯ ಇತ್ತೀಚಿನ ಸಿನೆಮಾ ‘ಪದ್ಮಾವತಿ’ಯ ವಿರುದ್ಧ ಬಿಜೆಪಿಯ ಹಲವು ಮುಖಂಡರು ಹಾಗೂ ರಜಪೂತ್ ಸಮುದಾಯದವರು ಪ್ರತಿಭಟನೆ ಮುಂದುವರಿಸಿರುವಂತೆಯೇ , ಪ್ರಕರಣವೊಂದರ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಕ್ತಿತ್ವವನ್ನು ಆಧರಿಸಿದ ಸಾಕ್ಷಚಿತ್ರ ‘ಆ್ಯನ್ ಇನ್‌ಸಿಗ್ನಿಫಿಕೆಂಟ್ ಮ್ಯಾನ್’ನ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್ , ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಾಕ್‌ಸ್ವಾತಂತ್ರ್ಯಕ್ಕೆ ಯಾವುದೇ ನಿರ್ಬಂಧ ಇರಕೂಡದು ಎಂದು ತಿಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠವು, ತಡೆಯಾಜ್ಞೆ ನೀಡುವ ವಿಷಯದಲ್ಲಿ ನ್ಯಾಯಾಲಯಗಳು ತೀರಾ ನಿಧಾನಗತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿತು.

2013ರಲ್ಲಿ ಕೇಜ್ರಿವಾಲ್ ಮೇಲೆ ಮಸಿ ಎರಚಿದ್ದಾರೆ ಎನ್ನಲಾಗಿರುವ ಅರ್ಜಿದಾರ ನಚಿಕೇತ ವಲ್ಹಾಕರ್, ಈ ಪ್ರಕರಣದ ವೀಡಿಯೊವನ್ನು ಸಿನೆಮಾದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ‘ಪದ್ಮಾವತಿ’ ಸಿನೆಮದ ಬಿಡುಗಡೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ರಜಪೂತ್ ಸಮುದಾಯದವರು, ಸಿನೆಮಾದಲ್ಲಿ ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವೆ ‘ಪ್ರಣಯ ಸಂಬಂಧ’ ಇತ್ತು ಎಂದು ಬಿಂಬಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪವನ್ನು ಬನ್ಸಾಲಿ ಹಾಗೂ ಇತರರು ಈ ಹಿಂದೆಯೇ ತಳ್ಳಿಹಾಕಿದ್ದಾರೆ.

 ಈ ಮಧ್ಯೆ ಅಜ್ಮೀರ್ ದರ್ಗದ ಝೈನುಲ್ ಆಬಿದೀನ್ ಅಲಿಖಾನ್ ಅವರು, ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವ ಕಾರಣ ಸಿನೆಮಾವನ್ನು ನಿಷೇಧಿಸಬೇಕು ಎಂದು ಪ್ರಧಾನಿಯನ್ನು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಯಿರುವ ಕಾರಣ ಸಿನೆಮಾ ಬಿಡುಗಡೆಯನ್ನು ಮುಂದೂಡುವಂತೆ ಉತ್ತರಪ್ರದೇಶ ಸರಕಾರ ಮಾಹಿತಿ ಮತ್ತು ಪ್ರಸಾರ ಇಲಾಖೆಯನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News