ಫಿಫಾ ವಿಶ್ವಕಪ್‌ಗೆ ಪೆರು; 36 ವರ್ಷಗಳ ಕನಸು ನನಸು

Update: 2017-11-16 18:16 GMT

ಲಿಮಾ, ನ.16: ಜೆಫರ್ಸನ್ ಫರ್ಫಾನ್ ಹಾಗೂ ಕ್ರಿಶ್ಟಿಯನ್ ರಾಮೊಸ್ ಬಾರಿಸಿದ ತಲಾ ಒಂದು ಗೋಲು ನೆರವಿನಿಂದ ಪೆರು ತಂಡ ನ್ಯೂಝಿಲೆಂಡ್ ವಿರುದ್ಧದ 2ನೆ ವಿಶ್ವಕಪ್ ಪ್ಲೇ-ಆಫ್ ಪಂದ್ಯದಲ್ಲಿ 2-0 ಅಂತರದಿಂದ ಜಯ ಸಾಧಿಸಿದೆ.

ಪೆರು ಈ ಗೆಲುವಿನೊಂದಿಗೆ ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆದ ಕೊನೆಯ ತಂಡ ಎನಿಸಿಕೊಂಡಿದೆ. ಮಾತ್ರವಲ್ಲ 36 ವರ್ಷಗಳ ಸುದೀರ್ಘ ಕನಸು ನನಸು ಮಾಡಿಕೊಂಡಿದೆ. ಪೆರು 1982ರ ಬಳಿಕ ವಿಶ್ವಕಪ್‌ನಲ್ಲಿ ಭಾಗವಹಿಸಿಲ್ಲ. 122ನೆ ರ್ಯಾಂಕಿನ ಕಿವೀಸ್ ತಂಡ 1982 ಹಾಗೂ 2010ರಲ್ಲಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದು, ಮೂರನೆ ಬಾರಿ ಭಾಗವಹಿಸುವ ಕನಸು ಈಡೇರಲಿಲ್ಲ.

ಶನಿವಾರ ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ಮೊದಲ ಪ್ಲೇ-ಆಫ್ ಪಂದ್ಯದಲ್ಲಿ ಉಭಯ ತಂಡಗಳು ಗೋಲುರಹಿತ ಡ್ರಾಗೊಳಿಸಿದ್ದವು. ಆದರೆ, ಬುಧವಾರ ನಡೆದ ಎರಡನೆ ಪ್ಲೇ-ಆಫ್ ಪಂದ್ಯದಲ್ಲಿ ಪೆರು ತಂಡ 28ನೆ ನಿಮಿಷದಲ್ಲಿ 1-0 ಮುನ್ನಡೆ ಪಡೆಯಿತು. ಫರ್ಫಾನ್ ಪೆರು ತಂಡದ ಪರ ಗೋಲು ಖಾತೆ ತೆರೆದರು. 65ನೆ ನಿಮಿಷದಲ್ಲಿ ಗೋಲು ಬಾರಿಸಿದ ರೊಮೊಸ್ ತಂಡಕ್ಕೆ 2-0 ಅಂತರದ ಗೆಲುವು ತಂದರು.

‘‘ನಮ್ಮ ಗುರಿ ಈಡೇರಿದ್ದಕ್ಕೆ ಧನ್ಯವಾದ. ನಾವು ದೇಶದ ಪರ ಐತಿಹಾಸಿಕ ಜಯ ಸಾಧಿಸಿದ್ದು, ಇದು ಅತ್ಯಂತ ಪ್ರಮುಖ ಕ್ಷಣವಾಗಿದೆ’’ ಎಂದು ಎರಡೂವರೆ ವರ್ಷಗಳ ಹಿಂದೆ ಪೆರು ತಂಡದ ಕೋಚ್ ಆಗಿ ನೇಮಕಗೊಂಡಿರುವ ರಿಕಾರ್ಡೊ ಗರೆಕಾ ಹೇಳಿದ್ದಾರೆ.

 ರಿಕಾರ್ಡೊ ಮಾರ್ಗದರ್ಶನದಲ್ಲಿ ಪೆರು ತಂಡ 2015ರ ಕೋಪಾ ಅಮೆರಿಕ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿತ್ತು. ಆದರೆ, ವಿಶ್ವಕಪ್‌ನ ಅರ್ಹತಾ ಪಂದ್ಯದ ಆರಂಭದಲ್ಲಿ ಪರದಾಟ ನಡೆಸಿತ್ತು. ಮೊದಲ ಆರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಸಾಧಿಸಿತ್ತು. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಪೆರು ಆಡಿರುವ 7ನೆ ಪಂದ್ಯದಲ್ಲಿ ಅದೃಷ್ಟ ಖುಲಾಯಿಸಿತ್ತು. ಆ ಪಂದ್ಯದಲ್ಲಿ ಪೆರು ತಂಡ ಬೊಲಿವಿಯ ವಿರುದ್ಧ ಸೋತಿತ್ತು. ಆದರೆ ಬೊಲಿವಿಯ ತಂಡ ಕಾನೂನುಬಾಹಿರವಾಗಿ ಆಟಗಾರನೊಬ್ಬನನ್ನು ಆಡಿಸಿತ್ತು ಎಂಬ ಆರೋಪ ಕೇಳಿ ಬಂದ ಕಾರಣ ಕ್ರೀಡಾ ಟ್ರಿಬ್ಯೂನಲ್ ಪೆರು ತಂಡಕ್ಕೆ 3-0 ಅಂತರದ ಗೆಲುವಿನ ತೀರ್ಪು ನೀಡಿತ್ತು.

ದಕ್ಷಿಣ ಅಮೆರಿಕ ತಂಡ ಪೆರು ಫಿಫಾ ರ್ಯಾಂಕಿಂಗ್‌ನಲ್ಲಿ 10ನೆ ಸ್ಥಾನದಲ್ಲಿದ್ದು, ವಿಶ್ವಕಪ್ ತಂಡಗಳ ಗುಂಪಿನಲ್ಲಿ 2ನೆ ಶ್ರೇಯಾಂಕ ಪಡೆದಿದೆ. ಮಾಸ್ಕೊದಲ್ಲಿ ಡಿ.1 ರಂದು ಡ್ರಾ ಪ್ರಕ್ರಿಯೆ ನಡೆಯಲಿದೆ.

     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News