8 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಐಡಿಯಲ್ ಐಸ್‌ಕ್ರೀಂ

Update: 2017-11-18 15:03 GMT

ಮಂಗಳೂರು, ನ. 18: ಗುರ್‌ಗಾಂವ್‌ನ ಹೊಟೇಲ್ ಮೆರಿಡಿಯನ್‌ನಲ್ಲಿ ನವೆಂಬರ್ 16ರಂದು ನಡೆದ ‘ದಿ ಗ್ರೇಟ್ ಇಂಡಿಯನ್ ಐಸ್ ಕ್ರೀಂ ಆ್ಯಂಡ್ ಫ್ರೋಝನ್ ಡೆಸರ್ಟ್’ ಸ್ಪರ್ಧೆಯಲ್ಲಿ ಮಂಗಳೂರಿನ ಐಡಿಯಲ್ ಐಸ್ ಕ್ರೀಂ 8 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ ಭಾರತದ ಅತ್ಯುತ್ತಮ ಆರು ಫ್ಲೇವರ್‌ನ ಐಸ್‌ಕ್ರೀಂಗಳಲ್ಲಿ ಮೂರು ಸ್ಥಾನ ಐಡಿಯಲ್ ಐಸ್‌ಕ್ರೀಂನ ಪಾಲಾಗಿದೆ.

ಐಡಿಯಲ್ ಐಸ್‌ಕ್ರೀಂನ ಈ ಸಾಧನೆಯ ಕುರಿತಂತೆ ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂತಸ ಹಂಚಿಕೊಂಡ ಐಡಿಯಲ್ ಐಸ್‌ಕ್ರೀಂನ ಆಡಳಿತ ನಿರ್ದೇಶಕ ಮುಕುಂದ್ ಕಾಮತ್, ಇದು ಮಂಗಳೂರಿಗರಿಗೆ ಸಂದ ಪ್ರಶಸ್ತಿ ಎಂದು ಅಭಿಮಾನ ವ್ಯಕ್ತಪಡಿಸಿದರು.

ಐಸ್‌ಕ್ರೀಂನ ಸಾರ್ಬೆಟ್ ವಿಭಾಗದಲ್ಲಿ ಐಡಿಯಲ್ ಐಸ್‌ಕ್ರೀಂನ ಮ್ಯಾಂಗೋ ಸಾರ್ಬೆಟ್ (ಮೋರ್ ದ್ಯಾನ್ ಮ್ಯಾಂಗೋ), ಹೊಸ ಅವಿಷ್ಕಾರ ವಿಭಾಗದಲ್ಲಿ ಮರ್ಝಿ ಪಾನ್ ಹಾಗೂ ವೆನಿಲಾ ಫ್ರೋಝನ್ ಡೆಸರ್ಟ್ ಭಾರತದ ಅತ್ಯುತ್ತಮ ಐಸ್‌ಕ್ರೀಂ ವಿಭಾಗದಲ್ಲಿ ಸ್ಥಾನ ಪಡೆದಿವೆ.

ಮಿದಲ್ಲೆ ವೆನಿಲ್ಲಾ ಐಸ್‌ಕ್ರೀಂ, ಮ್ಯಾಂಗೋ ಸಾರ್ಬೆಟ್, ವೆನಿಲಾ ಪ್ರೋಝನ್ ಡೆಸರ್ಟ್ ಹಾಗೂ ಮರ್ಝಿ ಪಾನ್ ಚಿನ್ನದ ಪ್ರಶಸ್ತಿಯನ್ನು ಪಡೆದಿದ್ದರೆ, ಚಾಕಲೇಟ್ ವಿಭಾಗದಲ್ಲಿ ಸ್ವಿಸ್ ಚಾಕಲೇಟ್ ಬೆಳ್ಳಿ ಪ್ರಶಸ್ತಿಯನ್ನು ಪಡೆದಿದೆ ಎಂದು ಮುಕುಂದ್ ಕಾಮತ್ ತಿಳಿಸಿದರು.

ಚಿನ್ನದ ವಿಭಾಗದಲ್ಲಿ ಸ್ಥಾನ ಪಡೆದ ಐಸ್‌ಕ್ರೀಂಗಳು ಅಂತಿಮವಾಗಿ ದೇಶದ ಅತ್ಯುತ್ತಮ ವಿಭಾಗದಲ್ಲಿ ಪಾಲ್ಗೊಳ್ಳುತ್ತವೆ. ಆ ವಿಭಾಗಕ್ಕೆ ಆಯ್ಕೆಯಾದ ಆರು ಐಸ್‌ಕ್ರೀಂಗಳಲ್ಲಿ ಮೂರು ಐಡಿಯಲ್ ಐಸ್‌ಕ್ರೀಂನದ್ದಾಗಿದೆ ಎಂಬುದು ಹೆಮ್ಮೆಯ ವಿಚಾರ. ಮಾತ್ರವಲ್ಲದೆ ಐಡಿಯಲ್ ಐಸ್‌ಕ್ರೀಂನ ಸ್ಟಾಂಡರ್ಡ್ ವೆನಿಲ್ಲಾ ಸತತ ಮೂರನೆ ಬಾರಿಗೆ ಚಿನ್ನದ ಪ್ರಶಸ್ತಿಯನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು.

ಸ್ಪರ್ಧೆಗೆ 20 ದಿನಗಳಿಗೆ ಮುಂಚಿತವಾಗಿ ಐಸ್‌ಕ್ರೀಂಗಳನ್ನು ರವಾನಿಸಲಾಗುತ್ತದೆ. ಅದಕ್ಕೆ ಕೋಡ್ ಸಂಖ್ಯೆಯನ್ನು ಮಾತ್ರವೇ ನೀಡಿರುತ್ತಾರೆ. ಹಾಗಾಗಿ ಯಾವ ಬ್ರಾಂಡಿನ ಐಸ್‌ಕ್ರೀಂ ಎಂಬುದು ಸ್ಪರ್ಧೆಯ ತೀರ್ಪುಗಾರರಿಗೆ ತಿಳಿಯದಿರುವುದರಿಂದ ಪಾರದರ್ಶಕವಾಗಿ ಆಯ್ಕೆ ನಡೆಯುತ್ತದೆ. ತಾವು ಸಂಸ್ಥೆಯಲ್ಲಿ ಐಸ್‌ಕ್ರೀಂನ ದರಕ್ಕಿಂತಲೂ ಮುಖ್ಯವಾಗಿ ಗುಣಮಟ್ಟಕ್ಕೆ ಒತ್ತು ನೀಡುವುದರಿಂದ ವಿನೂತನ ಅವಿಷ್ಕಾರಗಳೊಂದಿಗೆ ಗ್ರಾಹಕರಿಗೆ ಉತ್ತಮವಾದ ಉತ್ಪನ್ನವನ್ನು ನೀಡಲು ಸಾಧ್ಯವಾಗುತ್ತಿದೆ. 2008ರಿಂದ ಸಂಸ್ಥೆಯು ಈ ರಾಷ್ಟ್ರೀಯ ಐಸ್‌ಕ್ರೀಂ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, 2013ರಿಂದ ಚಿನ್ನದ ಬೇಟೆ ಆರಂಭವಾಯಿತು. ಐಡಿಯಲ್ ಐಸ್‌ಕ್ರೀಂಗೆ ಈ ಮಾನ್ಯತೆ ದೊರಕುವ ಮೂಲಕ ಮಂಗಳೂರು ಐಸ್‌ಕ್ರೀಂ ರಾಜಧಾನಿಯಾಗಿ ಮಾರ್ಪಟ್ಟಿದೆ. ಇದಕ್ಕೆ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಹಕರು ಕೂಡಾ ವುುಖ್ಯ ಕಾರಣ ಎಂದವರು ಹೇಳಿದರು.

ಐಡಿಯಲ್ ಐಸ್‌ಕ್ರೀಂ 40 ವಿವಿಧ ರುಚಿಯ (ಫ್ಲೇವರ್) ಐಸ್‌ಕ್ರೀಂಗಳನ್ನು ಹೊಂದಿದ್ದು, ವೆನಿಲಾ ಐಸ್‌ಕ್ರೀಂ ಅತ್ಯಂತ ಹೆಚ್ಚು ಮಾರಾಟವಾಗುವ ಫ್ಲೇವರ್ ಆಗಿದೆ. ಇದಲ್ಲದೆ ಬಟರ್‌ಸ್ಕಾಚ್ ಹಾಗೂ ಚಿಕ್ಕು ಐಸ್‌ಕ್ರೀಂ ಕೂಡಾ ಗ್ರಾಹಕರಿಂದ ಅತ್ಯಧಿಕ ಮೆಚ್ಚುಗೆಗೆ ಪಾತ್ರವಾಗಿದೆ.ಮರ್ಜಿಪಾನ್ ಹೊರತುಪಡಿಸಿ ಉಳಿದೆಲ್ಲಾ ಐಸ್‌ಕ್ರೀಂಗಳು ಪಾರ್ಲರ್‌ಗಳಲ್ಲಿಯೂ ಲಭ್ಯ. ಮಜಿ ಪಾನ್ ಡಿಸೆಂಬರ್ 2ರ ನಂತರ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಇದರ ಜತೆಯಲ್ಲೇ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ನಾಲ್ಕೈದು ಹೊಸ ಐಸ್‌ಕ್ರೀಂಗಳನ್ನು ಮಾರಕುಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅದರಲ್ಲಿ ಒಂದು ಐಸ್ ಶೇಕ್. ಇದು ಕ್ರೀಂನಿಂದ ಕೂಡಿದ ಐಸ್‌ಶೇಕ್ ಆಗಿರುತ್ತದೆ ಎಂದು ಮುಕುಂದ್ ವಿವರ ನೀಡಿದರು.

ಗೋಷ್ಠಿಯಲ್ಲಿ ಮುಕುಂದ್ ಕಾಮತ್‌ರ ತಾಯಿ ಜಯಾ ಕಾಮತ್, ಪತ್ನಿ ದಿವ್ಯಾ ಕಾಮತ್, ಸಂಸ್ಥೆಯ ಎಂ.ಎನ್. ಭಟ್, ಅಶ್ವಿನ್ ಹಾಗೂ ಕುಟುಂಬಸ್ಥರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ನೋಡಲು ಮಾತ್ರವಲ್ಲ, ತಿಂದಾಗಲೂ ಪಾನ್ ಈ ಮರ್ಝಿ ಪಾನ್!
ಐಡಿಯಲ್ ಐಸ್‌ಕ್ರೀಂನ ಹೊಸ ಅವಿಷ್ಕಾರದಲ್ಲಿ ಒಂದಾಗಿರುವ ಮರ್ಝಿ ಪಾನ್ ನೋಡಲು ಮಾತ್ರ ಪಾನ್ ಆಗಿಲ್ಲ. ಇದರ ರುಚಿಯೂ ಪಾನನ್ನೇ ಹೋಲುತ್ತದೆ. ಗುಲ್ಕುಂದ್ ಜತೆ ಐಸ್‌ಕ್ರೀಂನಿಂದ ಕೂಡಿದ ಈ ಮರ್ಝಿ ಪಾನ್ ಬಾಯೊಳಗಿಡುತ್ತಿದ್ದಂತೆಯೇ ಐಸ್‌ಕ್ರೀಂ ಕರಗಿ ಸಿಹಿ ಪಾನ್ ತಿಂದ ಅನುಭವವನ್ನು ನೀಡುತ್ತದೆ. ಮಾರುಕಟ್ಟೆಗೆ ಇನ್ನಷ್ಟೆ ಬಿಡುಗಡೆಯಾಗಬೇಕಿರುವ ಮರ್ಝಿ ಪಾನ್‌ನ ರುಚಿಯನ್ನು ಸವಿಯಲು ಪತ್ರಿಕಾಗೆಷ್ಠಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ರತ್ನಗಿರಿ ಅಲ್ಫಾನ್ಸೋ ಈ ಮ್ಯಾಂಗೋ ಸಾರ್ಬೆಟ್!
ಮಾವಿನ ಹಣ್ಣಿನ ರುಚಿಯನ್ನು ಒದಗಿಸುವ ಮ್ಯಾಂಗೋ ಸಾರ್ಬೆಟ್ ರತ್ನಗಿರಿ ಅಲ್ಫಾನ್ಸೋ ಮಾವಿನ ಹಣ್ಣಿನಿಂದ ತಯಾರಿಸಲಾಗುತ್ತದೆ. ಸಂಸ್ಥೆಯು ಹೊಸ ಉತ್ಪನ್ನಗಳನ್ನು ತಯಾರಿಸಿದಾಗ ಬಂಧು ಮಿತ್ರರು ಹಾಗೂ ಸ್ನೇಹಿತರಿಗೆ ಸವಿಯಲು ನೀಡಿ ಅವರಿಂದ ಪ್ರತಿಕ್ರಿಯೆಯನ್ನು ತಿಳಿದುಕೊಂಡ ಬಳಿಕವೇ ಉತ್ತಮವಾಗಿದ್ದಲ್ಲಿ ಮಾತ್ರವೇ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ ಎಂದು ಮುಕುಂದ್ ಕಾಮತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News