ಉತ್ತರಪ್ರದೇಶ ವಿರುದ್ಧ ಕರ್ನಾಟಕ 642/7

Update: 2017-11-18 18:32 GMT

ಕಾನ್ಪುರ, ನ.18: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅವರ ಆಕ್ರಮಣಕಾರಿ ಬ್ಯಾಟಿಂಗ್(238 ರನ್,301 ಎಸೆತ) ನೆರವಿನಿಂದ ಕರ್ನಾಟಕ ತಂಡ ಉತ್ತರಪ್ರದೇಶ ವಿರುದ್ಧದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ 7 ವಿಕೆಟ್‌ಗ ನಷ್ಟಕ್ಕೆ 642 ರನ್ ಕಲೆ ಹಾಕಿದೆ.

ಎರಡನೆ ದಿನವಾದ ಶನಿವಾರ ಪಾಂಡೆ ಭರ್ಜರಿ ಬ್ಯಾಟಿಂಗ್‌ನ ಮೂಲಕ ಹೀರೋವಾಗಿ ಹೊರಹೊಮ್ಮಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಲ್ಕನೆ ದ್ವಿಶತಕ ಸಿಡಿಸಿರುವ ಪಾಂಡೆ ಜೀವನಶ್ರೇಷ್ಠ ಸ್ಕೋರನ್ನು ದಾಖಲಿಸಿದರು.

ಕರ್ನಾಟಕ 3 ವಿಕೆಟ್‌ಗಳ ನಷ್ಟಕ್ಕೆ 327 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಪಾಂಡೆ ಎರಡನೆ ಪ್ರಥಮ ದರ್ಜೆ ಪಂದ್ಯವನ್ನಾಡುತ್ತಿರುವ ನಿಶ್ಚಲ್ ಅವರೊಂದಿಗೆ 5ನೆ ವಿಕೆಟ್‌ಗೆ 354 ರನ್ ಜೊತೆಯಾಟ ನಡೆಸಿ ಕರ್ನಾಟಕ ಈ ಋತುವಿನಲ್ಲಿ ಮೂರನೆ ಬಾರಿ 600ಕ್ಕೂ ಅಧಿಕ ರನ್ ಕಲೆಹಾಕಲು ನೆರವಾದರು.

 ಪಾಂಡೆ 231 ಎಸೆತಗಳಲ್ಲಿ 29 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಬೆಂಬಲದಿಂದ ದ್ವಿಶತಕ ಪೂರೈಸಿದರು. ವೇಗದ ಬೌಲರ್ ಇಮ್ತಿಯಾಝ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದ ಪಾಂಡೆ 301 ಎಸೆತಗಳಲ್ಲಿ 31 ಬೌಂಡರಿ, 2 ಸಿಕ್ಸರ್‌ಗಳನ್ನೊಳಗೊಂಡ 238 ರನ್ ಗಳಿಸಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 82 ಪಂದ್ಯಗಳಲ್ಲಿ 49.17ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಪಾಂಡೆ 16 ಶತಕಗಳ ಹಿತ ಒಟ್ಟು 5,500 ರನ್ ಗಳಿಸಿದ್ದಾರೆ.

ಕೆ.ಎಲ್. ರಾಹುಲ್‌ರಿಂದ ತೆರವಾದ ಸ್ಥಾನಕ್ಕೆ ಆಯ್ಕೆಯಾಗಿದ್ದ ನಿಶ್ಚಲ್ ತನಗೆ ಲಭಿಸಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಪಾಂಡೆ ಅವರೊಂದಿಗೆ 300ಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದ ನಿಶ್ಚಲ್ 425 ಎಸೆತಗಳಲ್ಲಿ 23 ಬೌಂಡರಿಗಳ ಸಹಿತ 195 ರನ್ ಗಳಿಸಿ ಪ್ರತಾಪ್‌ಗೆ ಔಟಾದರು. ಚೊಚ್ಚಲ ಶತಕ ಸಿಡಿಸಿದ್ದ ನಿಶ್ಚಲ್ ಚೊಚ್ಚಲ ದ್ವಿಶತಕ ಗಳಿಸಲು 5 ರನ್ ಕೊರತೆ ಎದುರಿಸಿದರು.

ಸ್ಟುವರ್ಟ್ ಬಿನ್ನಿ 25 ರನ್ ಗಳಿಸಿ ಔಟಾದರು. ಇಮ್ತಿಯಾಝ್ ಅಹ್ಮದ್(3-101) ಹಾಗೂ ಪ್ರತಾಪ್ ಸಿಂಗ್(3-108)ತಲಾ ಮೂರು ವಿಕೆಟ್ ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News