ಪದ್ಮಾವತಿ ವಿವಾದ: ತಜ್ಞರ ಸಮಿತಿ ರಚಿಸುವಂತೆ ಕೋರಿ ಸಿಎಂ ವಸುಂದರಾ ರಾಜೆಯಿಂದ ಸ್ಮೃತಿ ಇರಾನಿಗೆ ಪತ್ರ

Update: 2017-11-18 18:31 GMT

ಜೈಪುರ್, ನ.18: ಬಾಲಿವುಡ್ ಸಿನಿಮಾ ಪದ್ಮಾವತಿಯಲ್ಲಿ ಮಾಡಬಹುದಾದ ಬದಲಾವಣೆಗಳನ್ನು ಪರಿಶೀಲಿಸುವ ಸಲುವಾಗಿ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ರಾಜಸ್ಥಾನದ ಮುಖ್ಯಮಂತ್ರಿ ವಸುಂದರಾ ರಾಜೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ ಪ್ರಮಾಣ ಪತ್ರವನ್ನು ನೀಡುವ ಮುನ್ನ ಎಲ್ಲಾ ಸಂಭಾವ್ಯ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ರಾಜೆ ತಿಳಿಸಿದ್ದಾರೆ. ಪದ್ಮಾವತಿ ಚಿತ್ರತಂಡ ಸೆನ್ಸಾರ್ ಮಂಡಳಿಗೆ ಕಳುಹಿಸಿದ ಅರ್ಜಿಯು ಅಪೂರ್ಣವಾಗಿದೆ ಎಂಬ ಕಾರಣಕ್ಕೆ ಮಂಡಳಿಯು ಅದನ್ನು ವಾಪಸ್ ಕಳುಹಿಸಿದ ಬೆನ್ನಲ್ಲೇ ರಾಜೆ ಈ ಹೇಳಿಕೆಯನ್ನು ನೀಡಿದ್ದಾರೆ.

ಕೇಂದ್ರ ಸಚಿವೆಗೆ ಬರೆದ ಪತ್ರದಲ್ಲಿ ರಾಜೆ, ಈ ಚಿತ್ರವನ್ನು ವೀಕ್ಷಿಸಲು ಮತ್ತು ದರಲ್ಲಿ ಯಾವುದೇ ಸಮುದಾಯದ ಭಾವನೆಗೆ ಧಕ್ಕೆ ಮಾಡುವಂಥಾ ವಿಷಯಗಳಿದ್ದರೆ ಅದನ್ನು ತೆಗೆದು ಹಾಕುವ ಸಲುವಾಗಿ ಇತಿಹಾಸತಜ್ಞರ, ಚಿತ್ರ ಪಂಡಿತರ ಮತ್ತು ರಜಪೂತ ಸಮುದಾಯದ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮತ್ತು ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್ ಮತ್ತು ಶಹೀದ್ ಕಪೂರ್ ಪ್ರಧಾನ ಪಾತ್ರದಲ್ಲಿರುವ ಪದ್ಮಾವತಿಯ ಸಿನಿಮಾದ ಸುತ್ತ ಹಬ್ಬಿರುವ ವಿವಾದದ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ನೀಡಿರುವ ಮೊದಲ ಅಧಿಕೃತ ಹೇಳಿಕೆ ಇದಾಗಿದೆ.

ರಜಪೂತ ರಾಣಿ ಪದ್ಮಾವತಿ ಜೀವನವನ್ನಾಧರಿಸಿ ನಿರ್ಮಿಸಲಾಗಿರುವ ಈ ಚಿತ್ರವು ಡಿಸೆಂಬರ್ ಒಂದರಂದು ತೆರೆಕಾಣಲಿದೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆಗೆ ಈಗಾಗಲೇ ಬೆದರಿಕೆಗಳು ಬಂದಿವೆ.

ಶುಕ್ರವಾರದಂದು ಪ್ರತಿಭಟನಾಕಾರರು ರಾಜಸ್ಥಾನದ ಚಿತ್ತೋರ್‌ಘಡ ಕೋಟೆಯ ಪ್ರವೇಶ ದ್ವಾರವನ್ನು ಮುಚ್ಚಿದ್ದರು. ಶನಿವಾರ ಕೂಡಾ ರಜ್‌ಸಮಂದ್ ಜಿಲ್ಲೆಯಲ್ಲಿರುವ ಕುಂಬಲ್‌ಘಡ್ ಕೋಟೆಯ ಬಳಿ ರಜಪೂತ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News