ಆಸ್ಪತ್ರೆ ಆಮಂತ್ರಣ ಪತ್ರಿಕೆಯಲ್ಲಿ ‘ಸರಕಾರಿ’ ಪದವೇ ನಾಪತ್ತೆ: ಡಾ.ಭಂಡಾರಿ

Update: 2017-11-19 07:25 GMT

ಉಡುಪಿ, ನ.19: ಉಡುಪಿಯ ಸರಕಾರಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗಿಯವರಿಗೆ ಹಸ್ತಾಂತರಿಸಿ ನಿರ್ಮಿಸಿರುವ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಇಂದು ತರಾತುರಿಯಲ್ಲಿ ಉದ್ಘಾಟಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ಅಜ್ಜರಕಾಡು ಪಾರ್ಕ್‌ನಲ್ಲಿರುವ ಗಾಂಧಿ ಸ್ಮಾರಕದ ಎದುರು ಪ್ರತಿಭಟನೆ ನಡೆಸಿತು.

ಸಮಿತಿಯ ಪ್ರಮುಖ ಹಾಗೂ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಇಂದಿನ ಆಸ್ಪತ್ರೆ ಉದ್ಘಾಟನೆ ಆಮಂತ್ರಣ ಪತ್ರಿಕೆಯಲ್ಲಿ ಆಸ್ಪತ್ರೆ ಹೆಸರು ‘ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಆಸ್ಪತ್ರೆ’ ಎಂಬುದಿದೆ. ಆದರೆ ಈ ಹೆಸರಿನಲ್ಲಿ ಸರಕಾರಿ ಎಂಬ ಶಬ್ದವೇ ನಾಪತ್ತೆಯಾಗಿದೆ. ಸರಕಾರ ಈಗಾಗಲೇ ಈ ಆಸ್ಪತ್ರೆಯನ್ನು ಖಾಸಗಿಯವರಿಗೆ ಕೊಟ್ಟು ಬಿಟ್ಟಿದೆಯೇ ಎಂದು ಪ್ರಶ್ನಿಸಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಬಳಿಕ ಆಸ್ಪತ್ರೆ ಉದ್ಘಾಟನೆ ಮಾಡಲು ಆಗಲ್ಲ ಎಂಬ ಉದ್ದೇಶದಿಂದ ಇದನ್ನು ತರಾತುರಿಯಲ್ಲಿ ಉದ್ಘಾಟಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಮುಂದಿನ ಸರಕಾರ ಇವರದ್ದಲ್ಲ ಎಂಬುದು ಇವರಿಗೆ ಈಗಲೇ ಖಚಿತವಾಗಿದೆ ಎಂದು ಅವರು ಟೀಕಿಸಿದರು.

ಆಸ್ಪತ್ರೆ ಉದ್ಘಾಟನೆಯ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಪತ್ರಿಕಾಗೋಷ್ಠಿ ಕರೆದು ನೀಡಿಲ್ಲ. ಈ ಆಸ್ಪತ್ರೆಯ ಶರತ್ತುಗಳು ಏನು ಎಂಬುದನ್ನು ಅವರು ಜನರಿಗೆ ತಿಳಿಸಲಿ. ಯಾವ ಕಾರಣಕ್ಕೆ ಇದನ್ನು ಮುಚ್ಚಿಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಸರಕಾರಿ ಆಸ್ಪತ್ರೆ ಎಂದು ಹೇಳುವ ಈ ಆಸ್ಪತ್ರೆಗೆ ಖಾಸಗಿಯವರೇ ಪತ್ರಿಕೆಯಲ್ಲಿ ಜಾಹೀರಾತು ನೀಡಿ, ಖಾಸಗಿ ಹೊಟೇಲಿನಲ್ಲಿ ಸಂದರ್ಶನಗಳನ್ನು ಮಾಡಿ ಸಿಬ್ಬಂದಿಯನ್ನು ನೇಮಕ ಮಾಡುತ್ತಿದ್ದಾರೆ. ಹಾಗಾದರೆ ಇದು ಸರಕಾರಿ ಆಸ್ಪತ್ರೆ ಹೇಗೆ ಆಗುತ್ತದೆ ಎಂದು ಆರೋಪಿಸಿದರು.

ಆಸ್ಪತ್ರೆಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು
 ಈ ಆಸ್ಪತ್ರೆಯ ಉಳಿಸುವ ಹೋರಾಟ ಮುಂದುವರೆಸಲಾಗುತ್ತದೆ. ಅದಕ್ಕಾಗಿ ನಾವು ಸುಪ್ರೀಂ ಕೋರ್ಟ್‌ವರೆಗೆ ಹೋಗುತ್ತೇವೆ. ಇದೀಗ ಜಿಲ್ಲಾ ನ್ಯಾಯಾ ಲಯದಲ್ಲಿ ಇದರ ವಿರುದ್ಧ ಮೊಕದ್ದಮೆ ನಡೆಯುತ್ತಿದೆ. ಈ ಆಸ್ಪತ್ರೆ ವಿಚಾರದಲ್ಲಿ ರಾಜ್ಯ ಸರಕಾರದ ಪಾದರ್ಶಕತೆ ಕಾಯಿದೆಯ ಸಂಪೂರ್ಣ ಉಲ್ಲಂಘನೆಯಾ ಗಿದೆ. ಇದನ್ನು ನ್ಯಾಯಾಲಯದಲ್ಲಿ ಹಂತ ಹಂತವಾಗಿ ಪ್ರಶಿಸಲಾಗುವುದು. ಮುಂದೆ ಈ ಆಸ್ಪತ್ರೆ ವಾಪಾಸ್ಸು ಸರಕಾರ ಸಿಗುವ ರೀತಿಯಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.

ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿ, ಅಪಾತ್ರರು ದಾನ ಸ್ವೀಕರಿ ಸಬಾರದು ಮತ್ತು ದಾನ ಕೊಡಲೂಬಾರದು. ತಮ್ಮದಲ್ಲದ ಆಸ್ತಿಯನ್ನು ದಾನ ಕೊಡುವ ಹಕ್ಕು ಯಾರಿಗೂ ಇಲ್ಲ. ಇದು ಧರ್ಮವೂ ಅಲ್ಲ. ಆದರೆ ಹಾಜಿ ಅಬ್ದುಲ್ಲಾರು 100 ವರ್ಷಗಳ ಹಿಂದೆ ದಾನ ಮಾಡಿದ ಬೆಲೆಬಾಳುವ ಸಾರ್ವ ಜನಿಕ ಭೂಮಿಯನ್ನು ತನಗೆ ಕಿಂಚಿತ್ತು ಅಧಿಕಾರ ಇಲ್ಲದಿದ್ದರೂ ಖಾಸಗಿಯವರಿಗೆ ನೀಡಿರುವ ರಾಜ್ಯ ಸರಕಾರಕ್ಕೆ ದಿಕ್ಕಾರ. ಈ ಸರಕಾರಕ್ಕೆ ಕಾನೂನು ಇಲ್ಲ, ಧರ್ಮವೂ ಇಲ್ಲ. ಈ ಆಸ್ಪತ್ರೆಯಾಗಲಿ ಬಿಡಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯನ್ನು ಸರಕಾರವೇ ನಡೆಸುತ್ತಿದ್ದರೆ ಜನರು ಆ ಸೇವೆಯನ್ನು ತಮ್ಮ ಹಕ್ಕು ಎಂಬುದಾಗಿ ಪಡೆಯುತ್ತಿದ್ದರು. ಅನ್ನ, ಅಕ್ಷರ, ಆರೋಗ್ಯ ನಿಜವಾಗಿಯೂ ಜನರ ಹಕ್ಕು. ಆದರೆ ಇಂದು ಈ ಆರೋಗ್ಯವನ್ನು ನಾವು ಬಿ.ಆರ್.ಶೆಟ್ಟಿಯ ಕೃಪೆಯಿಂದ ಪಡೆಯಬೇಕಾಗಿದೆ. ಇದು ಪ್ರಜೆಗಳಿಗೆ ಮಾಡುತ್ತಿರುವ ಅವಮಾನ. ಹಕ್ಕು, ಔದಾರ್ಯ, ಕರುಣೆಗಳ ನಡುವಿನ ವ್ಯಾತ್ಯಾಸವೇ ಇಂದು ಕಾಣೆಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದುದು ಎಂದು ಅವರು ದೂರಿದರು.

ಹಾಜಿ ಅಬ್ದುಲ್ಲಾರ ಸಂಬಂಧಿ ಸಿರಾಜ್ ಅಹ್ಮದ್ ಮಾತನಾಡಿ, ಈ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುತ್ತಿರುವುದು ದಾನಿ ಹಾಜಿ ಅಬ್ದುಲ್ಲಾ ಸಾಹೇಬರಿಗೆ ಮಾಡಿರುವ ಅನ್ಯಾಯ. ಇದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ. ಈ ಆಸ್ಪತ್ರೆಯ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೇವೆ ಸಿಗಬೇಕೆಂಬುದು ದಾನಿಯ ಉದ್ದೇಶವಾಗಿತ್ತು. ಆದರೆ ಸರಕಾರ ದಾನಿಯ ಈ ಶರತ್ತುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.

ಮೀನಾಕ್ಷಿ ಭಂಡಾರಿ ಮಾತನಾಡಿ, ಈ ಸರಕಾರಿ ಆಸ್ಪತ್ರೆಗೆ ಬೇರೆಯವರ ಸ್ಮಾರಕ ಹೆಸರನ್ನು ಇಡುವ ಮೂಲಕ ಸರಕಾರ ಹಾಜಿ ಅಬ್ದುಲ್ಲಾರ ಹೆಸರನ್ನು ಬೀದಿಗೆ ಎಸೆದಿದೆ. ಇದು ಬಹಳ ದೊಡ್ಡ ತಪ್ಪು. ಇದರ ಪರಿಣಾಮ ಕೆಲವೇ ತಿಂಗಳಲ್ಲಿ ಜನರಿಗೆ ಗೊತ್ತಾಗಲಿದೆ. ಆಗ ಜನರು ಎಚ್ಚೆತ್ತುಕೊಂಡು ಅವರ ಜಾಗವನ್ನು ತೋರಿಸಿಕೊಡಲಿದ್ದಾರೆ ಎಂದು ತಿಳಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಇಂದಿರಾ ಗಾಂಧಿ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರೆ, ಇಂದು ಅವರ ಹೆಸರಿನಲ್ಲಿ ಅವರದ್ದೆ ಪಕ್ಷದವರು ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ಒಪ್ಪಿಸುತ್ತಿದೆ. ಇದು ಅಮಾನವೀಯ, ನಾಚಿಕೆಗೇಡಿನ ಸಂಗತಿ. ಖಾಸಗಿಯವರ ಹೊಟ್ಟೆ ತುಂಬಿಸುವ ಪ್ರಯತ್ನ ಇದಾಗಿದೆ. ಬಿ.ಆರ್.ಶೆಟ್ಟಿಗೆ ಈ ಆಸ್ಪತ್ರೆ ನಿರ್ಮಿಸಿರುವುದರಲ್ಲಿ ಲಾಭದ ಉದ್ದೇಶ ಇದೆ. ಇದು ಉಚಿತವಾಗಿ ಕಟ್ಟಿ ಕೊಡುವ ಉದ್ದೇಶ ಇಲ್ಲ ಎಂದು ಟೀಕಿಸಿದರು.

ಧರಣಿಯಲ್ಲಿ ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಕೆ.ಫಣಿರಾಜ್, ಇದ್ರೀಸ್ ಹೂಡೆ, ಹುಸೈನ್ ಕೋಡಿಬೆಂಗ್ರೆ, ಅಬ್ದುಲ್ ಅಝೀಝ್ ಉದ್ಯಾವರ, ರಾಘವೇಂದ್ರ ಕರ್ವಾಲು, ಕೆ.ಲಕ್ಷ್ಮಣ್, ಖತೀಬ್ ಅಬ್ದುಲ್ ರಶೀದ್, ಯೋಗೀಶ್ ಶೇಟ್, ಸಲಾವುದ್ದೀನ್, ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News