ವಿವಾದಗಳಿಂದ ದೂರವಿರಿ: ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ಕರೆ

Update: 2017-11-19 12:58 GMT

ಹೈದರಾಬಾದ್,ನ.19: ಅಧ್ಯಯನದ ಮೇಲೆ ಗಮನ ಹರಿಸುವಂತೆ ಮತ್ತು ವಿವಾದಗಳಲ್ಲಿ ಸಿಲುಕದಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ಭಿನ್ನಾಭಿಪ್ರಾಯಗಳಿರಬೇಕು, ಆದರೆ ಅದು ವಿಭಜನೆಗೆ ಕಾರಣವಾಗಬಾರದು ಎಂದು ಹೇಳಿದ್ದಾರೆ.

ಶನಿವಾರ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್(ಗೀತಂ) ವಿವಿಯ ಹೈದರಾಬಾದ್ ಕ್ಯಾಂಪಸ್‌ನಲ್ಲಿ ಎಂಟನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನಾಯ್ಡು ಸಣ್ಣಪುಟ್ಟ ವಿವಿಗಳಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದೇಶದ ಅಖಂಡತೆ ಯೊಂದಿಗೆ ರಾಜಿ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರವಿದೆ. ಆ ಬಗ್ಗೆ ಯಾವುದೇ ಸಂಶಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರವೂ ಇರಲೇಬೇಕು, ಆದರೆ ಅದಕ್ಕೆ ಕೆಲ ನಿಯಂತ್ರಣಗಳಿರಬೇಕು. ಆದರೆ ಅವು ಉಸಿರುಗಟ್ಟಿಸುವಂತಿರಬಾರದು ಎಂದರು. ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸಿದ ಅವರು, ಆದರೆ ಅದು ವಿಭಜನೆಗೆ ಕಾರಣವಾಗಬಾರದು. ಯಾವುದೇ ದೇಶವು ತನ್ನ ಏಕತೆ ಮತ್ತು ಅಖಂಡತೆ ಕುರಿತು ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ಈ ದೇಶವು ವಿಫುಲ ಅವಕಾಶಗಳನ್ನೊದಗಿಸುತ್ತದೆ ಎಂದ ಉಪ ರಾಷ್ಟ್ರಪತಿಗಳು ವಿದೇಶಗಳಲ್ಲಿ ಉದ್ಯೋಗ ಬಯಸುವ ಯುವಜನತೆಯನ್ನು ನಿರುತ್ತೇಜಿಸಲಿಲ್ಲವಾದರೂ, ಭಾರತದಲ್ಲಿಯೇ ಅವಕಾಶಗಳಿವೆ. ಆದರೂ ನೀವು ವಿದೇಶಗಳಿಗೆ ಹೋಗಲು ಬಯಸಿದ್ದರೆ ಹೋಗಿ. ಆದರೆ ಅಲ್ಲಿ ಕಲಿತು, ಗಳಿಸಿ ಸ್ವದೇಶಕ್ಕೆ ವಾಪಸಾಗಿ ಎಂದು ಕಿವಿಮಾತು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News