ಗುಜರಾತ್ ಚುನಾವಣೆಗೂ ಮುನ್ನ ರಾಹುಲ್ ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿ?

Update: 2017-11-19 13:18 GMT

ಹೊಸದಿಲ್ಲಿ, ನ.19: ಹಲವು ಸಮಯದಿಂದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ಗಾಂಧಿ ಶೀಘ್ರದಲ್ಲೇ ಪಕ್ಷದ ಅತ್ಯುನ್ನತ ಸ್ಥಾನವಾದ ಅಧ್ಯಕ್ಷ ಪದವಿಗೆ ಏರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಗುಜರಾತ್ ಚುನಾವಣೆಗೂ ಮುನ್ನ ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಲುವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೋಮವಾರದಂದು ಸಭೆ ಸೇರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಈ ಅನೌಪಚಾರಿಕ ಸಭೆಯಲ್ಲಿ ಪಕ್ಷದ ಸುಮಾರು ಇಪ್ಪತ್ತೈದು ಅಗ್ರಮಾನ್ಯ ನಾಯಕರು ಸೇರಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಇದು ಸೋನಿಯಾ ಅಧ್ಯಕ್ಷೆಯಾಗಿ ನಡೆಯಲಿರುವ ಕೊನೆ ಸಭೆ ಎಂದು ಹೇಳಲಾಗುತ್ತಿದೆ.

ತಾಯಿ ಸೋನಿಯಾ ಗಾಂಧಿಯಂತೆ ರಾಹುಲ್ ಗಾಂಧಿ ಕೂಡಾ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ.

ಪಕ್ಷವು ಚುನಾವಣಾ ಆಯೋಗ ನೀಡಿರುವ ಅಂತಿಮ ಗಡುವಾದ ಡಿಸೆಂಬರ್ 31ಕ್ಕೂ ಮುನ್ನ ಸಾಂಸ್ಥಿಕ ಚುನಾವಣೆಯನ್ನು ನಡೆಸಬೇಕಾಗಿದೆ. ಅಧ್ಯಕ್ಷ ಸ್ಥಾನಾಕಾಂಕ್ಷಿಗಳು ಅರ್ಜಿಯನ್ನು ಮುಂದಿನ ವಾರದಂದು ಹಾಕಬಹುದಾಗಿದ್ದು ಡಿಸೆಂಬರ್ 1 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅಗತ್ಯ ಬಿದ್ದರೆ ಡಿಸೆಂಬರ್ 8ರಂದು ಅಂದರೆ ಗುಜರಾತ್ ವಿಧಾನಸಭಾ ಚುನಾವಣೆಯ ಒಂದು ದಿನ ಮೊದಲು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ್ ದ್ವಿವೇದಿ, ಕೇವಲ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರೆ ಅವರನ್ನೇ ಪಕ್ಷದ ಅಧ್ಯಕ್ಷರೆಂದು ನಾಮಪತ್ರ ಹಿಂಪಡೆಯುವಿಕೆಯ ದಿನದಂದು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಗಾಗಿ ಡಿಸೆಂಬರ್ ಒಂದರ ಒಳಗಾಗಿ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರು ಸಿಗಲಿದ್ದಾರೆ.

ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಈ ಹಿಂದೆ ಸುಳಿವು ನೀಡಿದ್ದ ಸೋನಿಯಾ ಗಾಂಧಿ, ಶೀಘ್ರದಲ್ಲೇ ರಾಹುಲ್ ಕೈಗೆ ಪಕ್ಷದ ಚುಕ್ಕಾಣಿಯನ್ನು ನೀಡಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದ್ದರು.

70ರ ಹರೆಯದ ಸೋನಿಯಾ ಗಾಂಧಿ 1998ರಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ಅತ್ಯಂತ ಸುದೀರ್ಘ ಕಾಲ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಹಲವು ಬಾರಿ ಆಕೆ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದರು. ಈ ಕಾರಣದಿಂದ ಆಕೆ ಪಕ್ಷದ ಹೆಚ್ಚಿನ ಹೊಣೆಯನ್ನು ರಾಹುಲ್ ಹೆಗಲಿಗೆ ಹಾಕಿದ್ದರು.

ರಾಹುಲ್ ಗಾಂಧಿಯನ್ನು 2013ರ ಜನವರಿಯಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ರಾಹುಲ್‌ಗೆ ಭಡ್ತಿ ನೀಡುವ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ನಡೆದಿದ್ದು ಅದಕ್ಕೆ ಸಭೆಯಲ್ಲಿ ಅವಿರೋಧವಾದ ಮತ್ತು ಪ್ರಬಲ ಬೆಂಬಲ ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News