ಪರಿಶಿಷ್ಟರಿಗೆ ಫೋನ್‌ನಲ್ಲಿ ಜಾತಿನಿಂದನೆ ಕ್ರಿಮಿನಲ್ ಅಪರಾಧ: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ನ. 19: ಸಾರ್ವಜನಿಕ ಸ್ಥಳಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಫೋನ್‌ನಲ್ಲಿ ಜಾತಿ ನಿಂದನೆ ಮಾಡಿದರೆ ಕನಿಷ್ಠ 5 ವರ್ಷ ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗು ವುದು ಸುಪ್ರೀಂ ಕೋರ್ಟ್ ಹೇಳಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ಮಹಿಳೆಯನ್ನು ವಿರುದ್ಧ ಫೋನ್‌ನಲ್ಲಿ ಅವಮಾನಕರವಾಗಿ ಜಾತಿ ನಿಂದಿಸಿದ ಹಾಗೂ ಬೈದನೆಂದು ಹೇಳಲಾದ ವ್ಯಕ್ತಿಯ ವಿರುದ್ಧ ದಾಖಲಿಸಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಹಾಗೂ ಕ್ರಿಮಿನಲ್ ಕಲಾಪ ತಡೆ ಹಿಡಿಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಕೋರ್ಟ್ ತಿರಸ್ಕರಿಸಿದೆ.
ಮಹಿಳೆ ತನ್ನ ವಿರುದ್ಧ ದಾಖಲಿಸಿದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಉತ್ತರಪ್ರದೇಶ ನಿವಾಸಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿ, ಅಲಹಾಬಾದ್ ಉಚ್ಚ ನ್ಯಾಯಾಲಯ ಆಗಸ್ಟ್ 17ರಂದು ನೀಡಿದ ತೀರ್ಪಿನಲ್ಲಿ ಹಸ್ತಕ್ಷೇಪ ನಡೆಸಲು ನ್ಯಾಯಮೂರ್ತಿ ಜೆ. ಚಲಮೇಶ್ವರ್ ಹಾಗೂ ಎಸ್. ಅಬ್ದುಲ್ ನಝೀರ್ ಅವರನ್ನೊಳಗೊಂಡ ಪೀಠ ನಿರಾಕರಿಸಿದೆ.
ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಂದಿಗೆ ಮಾತನಾಡಿಲ್ಲ ಎಂಬುದನ್ನು ವಿಚಾರಣೆ ವೇಳೆ ಅವರು ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಮನವಿ ತಿರಸ್ಕರಿಸಿದೆ. ಆರೋಪಿಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ನ್ಯಾಯವಾದಿ ವಿವೇಕ್ ವಿಷ್ಣೋಯಿ, ಸಂಭಾಷಣೆ ನಡೆಸುವ ಸಂದರ್ಭ ತನ್ನ ಕಕ್ಷಿದಾರ ಹಾಗೂ ಮಹಿಳೆ ಬೇರೆಬೇರೆ ನಗರಗಳಲ್ಲಿದ್ದರು. ಇದನ್ನು ಸಾರ್ವಜನಿಕ ಸ್ಥಳ ಎಂದು ಹೇಳಲು ಅಸಾಧ್ಯ. ಇದು ಖಾಸಗಿ ಸಂಭಾಷಣೆ ಎಂದು ಪ್ರತಿಪಾದಿಸಿದರು.