×
Ad

ಕೇಂದ್ರ, ರಾಜ್ಯ ಸರಕಾರದ 210 ವೆಬ್‌ಸೈಟ್‌ಗಳಲ್ಲಿ ಆಧಾರ್ ವಿವರ ಬಹಿರಂಗ

Update: 2017-11-19 20:24 IST

ಹೊಸದಿಲ್ಲಿ, ನ. 19: ಕೇಂದ್ರ ಹಾಗೂ ರಾಜ್ಯ ಸರಕಾರದ 200ಕ್ಕೂ ಅಧಿಕ ವೆಬ್‌ಸೈಟ್‌ಗಳು ಕೆಲವು ಆಧಾರ್ ಫಲಾನುಭವಿಗಳ ಹೆಸರು ಹಾಗೂ ವಿಳಾಸದಂತಹ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದೆ ಎಂದು ಯುಐಡಿಎಐ ತಿಳಿಸಿದೆ.

ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿರುವ ಯುಐಡಿಎಐ, ನಿಯಮ ಉಲ್ಲಂಘನೆ ಬಗ್ಗೆ ಗಮನ ಹರಿಸಲಾಗಿದೆ ಹಾಗೂ ಈ ವೆಬ್‌ಸೈಟ್‌ಗಳಿಂದ ಆಧಾರ್ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಹೇಳಿದೆ.

ಈ ನಿಯಮ ಉಲ್ಲಂಘನೆ ಯಾವಾಗ ನಡೆದಿದೆ ಎಂಬುದನ್ನು ಯುಐಡಿಎಐ ತಿಳಿಸಿಲ್ಲ. ಆಧಾರ್ ವಿವರಗಳನ್ನು ಯುಐಡಿಎಐ ಎಂದಿಗೂ ಬಹಿರಂಗಪಡಿಸದು ಎಂದು ಅದು ಹೇಳಿದೆ.

ಆದಾಗ್ಯೂ, ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಇಲಾಖೆಗಳ ಸರಿಸುಮಾರು 210 ವೆಬ್‌ಸೈಟ್‌ಗಳು ಸಾರ್ವಜನಿಕರಿಗೆ ಮಾಹಿತಿ ನೀಡಲು ಫಲಾನುಭವಿಗಳ ಪಟ್ಟಿಯನ್ನು ಆಧಾರ್ ಸಂಖ್ಯೆ, ಹೆಸರು ವಿಳಾಸ ಹಾಗೂ ಇತರ ವಿವರಗಳೊಂದಿಗೆ ಪ್ರದರ್ಶಿಸಿದೆ ಎಂದು ಯುಐಡಿಎಐ ಹೇಳಿದೆ .

 ಯುಐಡಿಎಐ 12 ಅಂಕೆಗಳನ್ನು ಹೊಂದಿರುವ ಆಧಾರ್ ಕಾರ್ಡ್ ಅನ್ನು ನೀಡಿದೆ. ಇದನ್ನು ದೇಶದ ಯಾವುದೇ ಕಡೆಗೆ ಗುರುತು ಪತ್ರವಾಗಿ ಬಳಸಬಹುದು. ಜನರು ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯಗೊಳಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರ ತೊಡಗಿದೆ. ಯುಐಡಿಎಐ ಆಧಾರ್ ಕಾರ್ಡ್ ಅನ್ನು ಉತ್ತಮವಾಗಿ ವಿನ್ಯಾಸಗೊಳಿಸಿದೆ. ಇದರ ಬಹುಪದರದ ವಿಧಾನ ದೃಢವಾದ ಭದ್ರತಾ ವ್ಯವಸ್ಥೆ ಹೊಂದಿದೆ. ಅದೇ ರೀತಿ ದತ್ತಾಂಶ ಭದ್ರತೆ ಹಾಗೂ ಸಮಗ್ರತೆಯನ್ನು ಉನ್ನತ ಮಟ್ಟದಲ್ಲಿ ಕಾಯ್ದುಕೊಳ್ಳಲು ಇದನ್ನು ನವೀಕರಿಸಲಾಗುತ್ತಿದೆ ಎಂದು ಆರ್‌ಟಿಐಗೆ ಪ್ರತಿಕ್ರಿಯೆ ನೀಡಿದೆ.

ದತ್ತಾಂಶದ ಭದ್ರತೆ ಹಾಗೂ ಖಾಸಗಿತನವನ್ನು ಇನ್ನಷ್ಟು ಸುದೃಢಗೊಳಿಸಲು ದಿನನಿತ್ಯದ ಆಧಾರದಲ್ಲಿ ಭದ್ರತಾ ಪರಿಶೋಧನೆ ನಡೆಸಲಾಗುತ್ತಿದೆ. ಇದಲ್ಲದೆ, ದತ್ತಾಂಶವನ್ನು ಸುರಕ್ಷಿತವಾಗಿರಿಸಲು ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಯುಐಡಿಐಎ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News