×
Ad

ವಿದೇಶಿ ಕೈದಿಗಳ ಸ್ಥಿತಿಗತಿ ವರದಿ ಸಲ್ಲಿಸಿ: ಕೇಂದ್ರ ಸರಕಾರಕ್ಕೆ ಸುಪ್ರೀಂ ನಿರ್ದೇಶ

Update: 2017-11-19 20:27 IST

ಹೊಸದಿಲ್ಲಿ, ನ. 19: ತಮ್ಮ ಶಿಕ್ಷೆ ಅವಧಿಯನ್ನು ಕಳೆದ ಬಳಿಕ ಕಾರಾಗೃಹದಲ್ಲಿ ಕೊಳೆಯುತ್ತಿರುವ ಪಾಕಿಸ್ತಾನದ ಪ್ರಜೆಗಳು ಸೇರಿದಂತೆ ವಿದೇಶಿ ಪ್ರಜೆಗಳ ಇತ್ತೀಚಿನ ಸ್ಥಿತಿಗತಿ ಕುರಿತು ತನ್ನ ಮುಂದೆ ವರದಿಯನ್ನು ಸಕಾರಾತ್ಮಕವಾಗಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್ ಮೇ 3ರಂದು ಹೊರಡಿಸಿದ ಆದೇಶ ಅನುಸರಿಸಿ ನಾಲ್ಕು ವಾರಗಳ ಒಳಗೆ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಎ.ಕೆ. ಸಕ್ರಿ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತು.

 ಕಳೆದ ವರ್ಷ ಎಪ್ರಿಲ್‌ನಲ್ಲಿ ಈ ವಿಷಯದ ಕುರಿತು ಸ್ಥಿತಿಗತಿ ವರದಿ ಸಲ್ಲಿಸಲು ವಿಫಲವಾದ ಬಗ್ಗೆ ಕೇಂದ್ರ ಸರಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಈ ಪ್ರಕರಣದಲ್ಲಿ ದೂರುದಾರ ಪರ ಹಿರಿಯ ನ್ಯಾಯವಾದಿ ಭೀಮ್ ಸಿಂಗ್, ತಾನು 2005ರಲ್ಲಿ ದಾವೆ ದಾಖಲಿಸುವಾಗ ಜಮ್ಮು ಕಾಶ್ಮೀರದಲ್ಲಿ ಇಂತಹ 82 ಮಂದಿಯನ್ನು ವಶದಲ್ಲಿ ಇರಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

 ಶಿಕ್ಷೆಯನ್ನು ಸಂಪೂರ್ಣವಾಗಿ ಅನುಭವಿಸಿದ ಬಳಿಕವೂ ಭಾರತದ ವಿವಿಧ ಜೈಲುಗಳಲ್ಲಿ ಕೊಳೆಯುತ್ತಿರುವ ವಿದೇಶಿ ಪ್ರಜೆಗಳನ್ನು ಬಿಡುಗಡೆ ಮಾಡಿ ಅವರ ದೇಶಕ್ಕೆ ವಾಪಾಸ್ ಕಳುಹಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು. ಜಮ್ಮು ಕಾಶ್ಮೀರದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿ ಬಂಧಿತರಾಗಿದ್ದ ಪಾಕಿಸ್ತಾನಿ ಪ್ರಜೆಗಳ ಕುರಿತು ಕೂಡ ಈ ಮನವಿಯಲ್ಲಿ ಧ್ವನಿ ಎತ್ತಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News