ಚೆನ್ ಲಾಂಗ್ ಗೆ ಚೀನಾ ಓಪನ್ ಕಿರೀಟ

Update: 2017-11-19 18:27 GMT

ಶಾಂಘೈ, ನ.19: ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್ ಡೆನ್ಮಾರ್ಕ್‌ನ ವಿಶ್ವದ ನಂ.1 ಆಟಗಾರ ವಿಕ್ಟರ್ ಅಕ್ಸೆಲ್‌ಸನ್‌ರನ್ನು ಮಣಿಸುವ ಮೂಲಕ ಚೀನಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡರು. ರವಿವಾರ ನಡೆದ ಪುರುಷರ ಸಿಂಗಲ್ಸ್ ನ ಫೈನಲ್‌ನಲ್ಲಿ 6ನೇ ಶ್ರೇಯಾಂಕದ ಲಾಂಗ್ ಅವರು ಅಕ್ಸೆಲ್‌ಸನ್‌ರನ್ನು 21-16, 14-21, 21-13 ಗೇಮ್‌ಗಳ ಅಂತರದಿಂದ ಮಣಿಸಿ ನಾಲ್ಕನೆ ಬಾರಿ ಚೀನಾ ಓಪನ್ ಟ್ರೋಫಿ ಗೆದ್ದುಕೊಂಡರು. 23ರ ಹರೆಯದ ಅಕ್ಸೆಲ್‌ಸನ್ ಈ ವರ್ಷ ವಿಶ್ವ ಪ್ರಶಸ್ತಿಯನ್ನು ಜಯಿಸುವ ಮೂಲಕ ಬ್ಯಾಡ್ಮಿಂಟನ್‌ನ ನಂ.1 ಆಟಗಾರ ನಾಗಿದ್ದಾರೆ.

   ರವಿವಾರ ಚೆನ್ ವಿರುದ್ಧ ಸೋತಿರುವ ಅಕ್ಸೆಲ್‌ಸನ್ ಚೀನಾ ಆಟಗಾರನ ವಿರುದ್ಧ ತನ್ನ ಕಳಪೆ ದಾಖಲೆ ಮುಂದುವರಿಸಿದರು. 28ರ ಹರೆಯದ ಚೆನ್ ಅವರು ಅಕ್ಸೆಲ್‌ಸನ್ ವಿರುದ್ಧ ಆಡಿರುವ 9 ಪಂದ್ಯಗಳ ಪೈಕಿ 8ರಲ್ಲಿ ಜಯ ಸಾಧಿಸಿದ್ದಾರೆ. ಚೆನ್ 2013ರ ಬಳಿಕ ಮೊದಲ ಬಾರಿ ಚೀನಾ ಓಪನ್ ಜಯಿಸಿದರು. ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್ ತಂಡದ ಅಕಾನೆ ಯಮಗುಚಿ ಚೀನಾದ ಕ್ವಾಲಿಫೈಯರ್ ಗಾವೊ ಫ್ಯಾಂಗ್‌ಜೀ ಅವರನ್ನು ಸೋಲಿಸಿ ಈವರ್ಷ ಮೊದಲ ಬಾರಿ ಸೂಪರ್ ಸರಣಿ ಪ್ರಶಸ್ತಿ ಜಯಿಸಿದರು. 5ನೆ ಶ್ರೇಯಾಂಕದ ಯಮಗುಚಿ 41 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ಗಾವೊರನ್ನು 21-13, 21-15 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News