ಪ್ರಧಾನಿ ಮೋದಿಗೆ ಸಂಸತ್ತನ್ನು ಎದುರಿಸುವ ಧೈರ್ಯವಿಲ್ಲ: ಸೋನಿಯಾ ಟೀಕೆ

Update: 2017-11-20 14:56 GMT

ಹೊಸದಿಲ್ಲಿ, ನ.20: ಕ್ಷುಲ್ಲಕ ಕಾರಣ ಮುಂದಿಟ್ಟು ಕೇಂದ್ರ ಸರಕಾರ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಹಾಳುಗೆಡವಿದೆ . ಪ್ರಧಾನಿ ಮೋದಿಗೆ ಸಂಸತ್ತನ್ನು ಎದುರಿಸುವ ಧೈರ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲೂಸಿ) ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ, ‘ದೋಷಪೂರಿತ’ ತೆರಿಗೆ ಪದ್ದತಿಯಾದ ಜಿಎಸ್‌ಟಿಯನ್ನು ಸರಕಾರ ಯಾವುದೇ ಪೂರ್ವಸಿದ್ಧತೆಯಿಲ್ಲದೆ ತರಾತುರಿಯಿಂದ ಜಾರಿಗೊಳಿಸಿದೆ ಎಂದು ದೂರಿದರು.

   ನೋಟು ನಿಷೇಧದಿಂದ ಮಿಲಿಯಾಂತರ ಜನತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದ ಸೋನಿಯಾ, ಕ್ಷುಲ್ಲಕ ಕಾರಣ ಮುಂದಿಟ್ಟು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಹಾಳುಗೆಡಹುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಕರಿಛಾಯೆ ಹಬ್ಬಿಸಿದೆ ಎಂದು ಹೇಳಿದರು. ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿ ಎಂಬ ಅವಳಿ ಪ್ರಹಾರದಿಂದ ತತ್ತರಿಸಿರುವ ಆರ್ಥಿಕತೆಯ ಬಗ್ಗೆ ವಿಪಕ್ಷಗಳು ಅಧಿವೇಶನದಲ್ಲಿ ಧ್ವನಿ ಎತ್ತಲಿವೆ ಎಂದು ಸರಕಾರಕ್ಕೆ ತಿಳಿದಿದೆ. ವಿಪಕ್ಷಗಳನ್ನು ಎದುರಿಸಲು ಸರಕಾರ ಮತ್ತು ಪ್ರಧಾನಿ ಹೆದರುತ್ತಿದ್ದಾರೆ. ಪ್ರಜಾಪ್ರಭುತ್ವದ ದೇಗುಲಕ್ಕೆ ಬೀಗ ಜಡಿಯುವ ಮೂಲಕ ವಿಧಾನಸಭೆ ಚುನಾವಣೆಗೂ ಮುನ್ನ ಸಾಂವಿಧಾನಿಕ ಉತ್ತರದಾಯಿತ್ವದಿಂದ ನುಣುಚಿಕೊಳ್ಳಬಹುದು ಎಂದು ಸರಕಾರ ಭಾವಿಸುತ್ತಿದೆ ಎಂದು ಸೋನಿಯಾ ಟೀಕಿಸಿದರು.

 ಸಂಪ್ರದಾಯದಂತೆ ಸಂಸತ್‌ನ ಚಳಿಗಾಲದ ಅಧಿವೇಶನ ನವೆಂಬರ್ ತೃತೀಯ ವಾರದಲ್ಲಿ ಆರಂಭಗೊಂಡು ಡಿಸೆಂಬರ್ ತೃತೀಯ ವಾರದವರೆಗೆ ಮುಂದುವರಿಯುತ್ತದೆ.ಆದರೆ ಇದೀಗ ಪ್ರಧಾನಿ ಮತ್ತು ಕೇಂದ್ರ ಸಚಿವರು ಗುಜರಾತ್ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಾರಣ ಚಳಿಗಾಲದ ಅಧಿವೇಶನಕ್ಕೆ ಇನ್ನೂ ದಿನಾಂಕ ನಿಗದಿಗೊಳಿಸಿಲ್ಲ.

ಸಂಸತ್ ನಿಯಮದ ಪ್ರಕಾರ, ಎರಡು ಅಧಿವೇಶನಗಳ ನಡುವೆ ಗರಿಷ್ಠ 6 ತಿಂಗಳ ಅಂತರ ಇರಬಹುದು. ಸಂಸತ್‌ನ ಕಳೆದ ಅಧಿವೇಶನ ಆಗಸ್ಟ್‌ನಲ್ಲಿ ಕೊನೆಗೊಂಡಿರುವ ಕಾರಣ ಮುಂದಿನ ಫೆಬ್ರವರಿಯೊಳಗೆ ಚಳಿಗಾಲದ ಅಧಿವೇಶನ ನಡೆಸುವ ಅವಕಾಶವಿದೆ. ಸರಕಾರ ದಿನಾಂಕ ನಿರ್ಧರಿಸಿದ ಬಳಿಕ ಸಂಸತ್ ಸದಸ್ಯರಿಗೆ 15 ದಿನಗಳ ಮೊದಲು ನೋಟಿಸ್ ನೀಡಿ ತಿಳಿಸುವ ನಿಯಮವಿದೆ.

ಈ ಮಧ್ಯೆ ಕಾಂಗ್ರೆಸ್ ಟೀಕೆಯನ್ನು ತಳ್ಳಿಹಾಕಿರುವ ಕೇಂದ್ರ ವಿತ್ತ ಸಚಿವ ಅರುಣ್‌ಜೇಟ್ಲಿ, ಚಳಿಗಾಲದ ಅಧಿವೇಶನ ಖಂಡಿತಾ ನಡೆಯುತ್ತದೆ. ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಚುನಾವಣೆ ಸಂದರ್ಭ ಸಂಸತ್ ಅಧಿವೇಶನವನ್ನು ಮುಂದೂಡಿರುವುದು ಇದು ಹೊಸತೇನಲ್ಲ. ಈ ಹಿಂದೆಯೂ ನಡೆದಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News